ಸಾಮಾನ್ಯವಾಗಿ ಕೀಲು ನೋವು ಎಂದರೆ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಎಂದೇ ಹಲವರು ಭಾವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲೂ ಮೊಣಕಾಲು, ಭುಜ, ಮೊಣಕೈ ಹಾಗೂ ಮಣಿಕಟ್ಟು ಮುಂತಾದ ಕೀಲುಗಳಲ್ಲಿ ನೋವು, ಬಿಗಿತ ಮತ್ತು ಊತದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಕ್ರೀಡಾಪಟುಗಳು, ಜಿಮ್‌ನಲ್ಲಿ ಅತಿಯಾಗಿ ವ್ಯಾಯಾಮ ಮಾಡುವವರು ಮಾತ್ರವಲ್ಲದೆ, ದಿನನಿತ್ಯದ ಚಟುವಟಿಕೆಗಳಲ್ಲಿ ಒಂದೇ ರೀತಿಯ ಶಾರೀರಿಕ ಚಲನವಲನಗಳನ್ನು ಪುನರಾವರ್ತಿಸುವ ಯುವಕ-ಯುವತಿಯರಲ್ಲೂ ಈ ಸಮಸ್ಯೆ ತಲೆದೋರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕೀಲು ನೋವಿಗೆ ಪ್ರಮುಖ ಕಾರಣಗಳು:
ಗಾಯ ಮತ್ತು ಸ್ನಾಯುಗಳ ಮೇಲಿನ ಒತ್ತಡ: ಕ್ರೀಡೆ ಅಥವಾ ಅತಿಯಾದ ದೈಹಿಕ ಶ್ರಮದಿಂದ ಉಂಟಾಗುವ ಉಳುಕು ಅಥವಾ ಗಾಯಗಳು ಕೀಲುಗಳ ಸುತ್ತಲಿನ ಅಂಗಾಂಶಗಳನ್ನು ಹಾನಿಗೊಳಿಸಿ ನೋವು ಹಾಗೂ ಊತಕ್ಕೆ ಕಾರಣವಾಗುತ್ತವೆ.
ಗೌಟ್ (Gout): ದೇಹದಲ್ಲಿ ಯೂರಿಕ್ ಆಮ್ಲದ (Uric Acid) ಮಟ್ಟ ಹೆಚ್ಚಾಗಿ, ಅದರ ಹರಳುಗಳು ಕೀಲುಗಳಲ್ಲಿ ಶೇಖರಣೆಗೊಂಡಾಗ ಹಠಾತ್ ತೀವ್ರ ನೋವು, ಊತ ಹಾಗೂ ಕೆಂಪಾಗುವಿಕೆ ಉಂಟಾಗುತ್ತದೆ.
ಆಟೋ ಇಮ್ಯೂನ್ ಕಾಯಿಲೆಗಳು: ರುಮಟಾಯ್ಡ್ ಆರ್ಥ್ರೈಟಿಸ್ (Rheumatoid Arthritis) ನಂತಹ ಸಮಸ್ಯೆಗಳಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯು ತಪ್ಪಾಗಿ ಕೀಲುಗಳ ಮೇಲೆಯೇ ದಾಳಿ ಮಾಡುವುದರಿಂದ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ.
ಆಸ್ಟಿಯೋ ಆರ್ಥ್ರೈಟಿಸ್: ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವ ಈ ಸಮಸ್ಯೆ ಕೀಲುಗಳ ನಡುವಿನ ಕಾರ್ಟಿಲೇಜ್ (ಮೃದ್ವಸ್ಥಿ) ಸವೆಯುವುದರಿಂದ ಕೆಲವೊಮ್ಮೆ ಸಣ್ಣ ವಯಸ್ಸಿನಲ್ಲೂ ಬರಬಹುದು.
ಇತರ ಕಾರಣಗಳು: ಟೆಂಡಿನೈಟಿಸ್, ಲೂಪಸ್, ಫೈಬ್ರೊಮ್ಯಾಲ್ಜಿಯಾ, ಥೈರಾಯ್ಡ್ ಸಮಸ್ಯೆಗಳು ಹಾಗೂ ವೈರಲ್ ಸೋಂಕುಗಳು ಕೂಡ ಕೀಲು ನೋವಿಗೆ ದಾರಿಯಾಗಬಹುದು.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಕೀಲು ನೋವಿನ ಜೊತೆಗೆ ಅತಿಯಾದ ಊತ, ಕೆಂಪಾಗುವಿಕೆ, ಬಿಸಿ ಅನುಭವ ಅಥವಾ ಜ್ವರವಿದ್ದರೆ.
ಯಾವುದಾದರೂ ಗಾಯದ ನಂತರ ಕೀಲುಗಳ ಆಕಾರ ಬದಲಾಗಿದ್ದರೆ ಅಥವಾ ಕೀಲುಗಳನ್ನು ಅಲುಗಾಡಿಸಲು ಸಾಧ್ಯವಾಗದಷ್ಟು ತೀವ್ರ ನೋವಿದ್ದರೆ.
ನೋವು ಆಗಾಗ ಮರುಕಳಿಸುತ್ತಿದ್ದರೆ ಅಥವಾ ದೀರ್ಘಕಾಲದವರೆಗೆ ಮುಂದುವರಿದರೆ.
ಸಲಹೆ:
ಕೀಲು ನೋವು ಬಂದಾಗ ಸ್ವಯಂ ಚಿಕಿತ್ಸೆ ಅಥವಾ ದೀರ್ಘಕಾಲದವರೆಗೆ ಪೇನ್‌ಕಿಲ್ಲರ್ (ನೋವು ನಿವಾರಕ) ಮಾತ್ರೆಗಳನ್ನು ತೆಗೆದುಕೊಳ್ಳುವುದು ಹಾನಿಕಾರಕ. “ಇನ್ನೂ ಸಣ್ಣ ವಯಸ್ಸು ತಾನೇ, ತಾನಾಗಿಯೇ ಗುಣವಾಗುತ್ತದೆ” ಎಂದು ನಿರ್ಲಕ್ಷಿಸದೆ, ಆರಂಭದಲ್ಲೇ ವೈದ್ಯಕೀಯ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.













