ದಾವಣಗೆರೆ.ಆಗಸ್ಟ್.19: ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಕರೆಕಟ್ಟೆ ಗ್ರಾಮದ ಯೂಸುಫ್ ಖಾನ್ (33) ಹಾಗೂ ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ (43) ಎಂದು ಗುರುತಿಸಲಾಗಿದೆ.
ತನ್ನ ಅನಾರೋಗ್ಯ ಪೀಡಿತ ಮಗುವಿಗೆ ದಾವಣಗೆರೆಯಲ್ಲಿ ಔಷಧಿ ಖರೀದಿಸಿ ವಾಪಸ್ ಊರಿಗೆ ಮರಳುತ್ತಿದ್ದ ಯೂಸುಫ್ ಖಾನ್ ಅವರ ಬೈಕ್ಗೆ, ಚನ್ನಗಿರಿ ಮಾರ್ಗದಿಂದ ಎದುರಾಗಿ ಬರುತ್ತಿದ್ದ ಅಣ್ಣಪ್ಪ ಅವರ ಬೈಕ್ ವೇಗವಾಗಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹದಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.










