1947ರ ಆಗಸ್ಟ್ 15ರಂದು ಭಾರತವು ಸುಮಾರು ಎರಡು ಶತಮಾನಗಳ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.2026ರ ಆಗಸ್ಟ್ 15ರಂದು ಭಾರತವು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ದೇಶದಾದ್ಯಂತ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಸ್ವಾತಂತ್ರ್ಯ ದಿನದ ಇತಿಹಾಸವೇನು?
ಭಾರತಕ್ಕೆ ಸ್ವಾತಂತ್ರ್ಯ ನೀಡುವ ಪ್ರಕ್ರಿಯೆಯಲ್ಲಿ Indian Independence Act 1947 ಪ್ರಮುಖ ಪಾತ್ರ ವಹಿಸಿತು. ಬ್ರಿಟಿಷ್ ಸಂಸತ್ತಿನಲ್ಲಿ ಈ ಕಾಯ್ದೆಯನ್ನು ಜುಲೈ 1947ರಲ್ಲಿ ಅಂಗೀಕರಿಸಲಾಯಿತು. ಕಾಯ್ದೆಯ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳು ಅಸ್ತಿತ್ವಕ್ಕೆ ಬರಬೇಕಿತ್ತು.
ಅಂತಿಮವಾಗಿ 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ರಾಷ್ಟ್ರವಾಯಿತು. ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿ, ದೇಶವನ್ನುದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು.
ಸ್ವಾತಂತ್ರ್ಯ ಪಡೆಯುವ ಈ ಹಾದಿ ಸುಲಭವಾಗಿರಲಿಲ್ಲ. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಅನೇಕ ನಾಯಕರು ಹಾಗೂ ಅಸಂಖ್ಯಾತ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಲವರು ಜೈಲು ಸೇರಿದರು, ಹಿಂಸೆ ಅನುಭವಿಸಿದರು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.
ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಆಗಸ್ಟ್ 15 ಭಾರತದಲ್ಲಿ ರಾಷ್ಟ್ರೀಯ ರಜಾದಿನವಾಗಿದೆ. ಈ ದಿನ ದೇಶದಾದ್ಯಂತ ರಾಷ್ಟ್ರಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ರಾಷ್ಟ್ರಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡುವುದು ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಕಾರ್ಯಕ್ರಮವಾಗಿದೆ. ಭಾಷಣದಲ್ಲಿ ಸರ್ಕಾರದ ಸಾಧನೆಗಳು, ದೇಶದ ಮುಂದಿನ ಗುರಿಗಳು ಮತ್ತು ಅಭಿವೃದ್ಧಿಯ ಯೋಜನೆಗಳ ಕುರಿತು ಮಾತನಾಡಲಾಗುತ್ತದೆ.
ಸ್ವಾತಂತ್ರ್ಯ ದಿನ ಕೇವಲ ಸಂಭ್ರಮದ ದಿನವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದವರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸಿಕೊಳ್ಳುವ ದಿನವೂ ಹೌದು.ಇಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿಳಿಸುವುದು ಮತ್ತು ದೇಶದ ಏಕತೆ, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಗೌರವಿಸುವ ಜವಾಬ್ದಾರಿಯೂ ಇದೆ.ಹೀಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಆಗಸ್ಟ್ 15 ಹೆಮ್ಮೆಯ ದಿನ. ಸ್ವಾತಂತ್ರ್ಯದ ಬೆಲೆಯನ್ನು ಅರಿತು, ದೇಶದ ಪ್ರಗತಿ ಮತ್ತು ಏಕತೆಗೆ ಕೊಡುಗೆ ನೀಡುವ ಸಂಕಲ್ಪ ಮಾಡುವ ದಿನವೇ ಸ್ವಾತಂತ್ರ್ಯ ದಿನ.









