ಚಿತ್ರದುರ್ಗ, ಆ.09 : “ಧರ್ಮ ಎಂದರೆ ಬೆಳಕಿನ ಸತ್ಯಶೋಧನೆ. ಸಮಾಜವನ್ನು ಜ್ಞಾನದತ್ತ ಕೊಂಡೊಯ್ಯುವ ಧರ್ಮಕೇಂದ್ರಗಳಾಗಿ ದೇವಾಲಯ, ಗುಡಿ, ತೀರ್ಥಕ್ಷೇತ್ರ, ಧರ್ಮಕ್ಷೇತ್ರ ಹಾಗೂ ತಪೋಕ್ಷೇತ್ರಗಳು ವಿವಿಧ ನಾಮಗಳಲ್ಲಿ ಗುರುತಿಸಿ ಕೊಂಡಿವೆ” ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ವಿಶ್ವ ಹಿಂದೂ ಪರಿಷದ್ ಆಯೋಜಿಸಲಾಗಿದ್ದ ಅರ್ಚಕರ ಪ್ರಶಿಕ್ಷಣ ಶಿಬಿರದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ದೇವಾಲಯಗಳ ಇತಿಹಾಸ ಮತ್ತು ಅರ್ಚಕರ ಜವಾಬ್ದಾರಿಯ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ದೇವಾಲಯಗಳು ವಿದ್ಯಾಕೇಂದ್ರಗಳಾಗಿದ್ದವು. ಪ್ರಾಚೀನ ಕಾಲದಲ್ಲಿ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ಅಕ್ಷರ, ನೃತ್ಯ, ಸಂಗೀತ, ಶಿಲ್ಪಕಲೆ ಸೇರಿದಂತೆ ಸಕಲ ವಿದ್ಯೆಗಳನ್ನು ನೀಡುವ ವಿದ್ಯಾಕೇಂದ್ರಗಳಾಗಿದ್ದವು. ಅಂದಿನ ಕಾಲದ ಪೂಜಾರಿಗಳು, ಅರ್ಚಕರು ಹಾಗೂ ದೈವ ಉಪಾಸಕರು ಮಹಾನ್ ಜ್ಞಾನಿಗಳಾಗಿದ್ದರು. ಅವರ ಜ್ಞಾನಮಟ್ಟ ಉನ್ನತವಾಗಿದ್ದರಿಂದ ದೇವಾಲಯಗಳು ನ್ಯಾಯಾಲಯಗಳ ರೀತಿಯಲ್ಲಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದವು ಎಂದು ಶ್ರೀಗಳು ಸ್ಮರಿಸಿದರು.

ಜ್ಞಾನದ ಕೊರತೆಯೇ ಕಂದಾಚಾರಕ್ಕೆ ಕಾರಣ. ಕಾಲಕ್ರಮೇಣ ಬದಲಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಾಗಿದೆಯಾದರೂ, ಅರ್ಚಕರಲ್ಲಿ ಜ್ಞಾನದ ಮಟ್ಟ ಇಳಿಮುಖವಾಗಿದೆ. ಇದರ ಪರಿಣಾಮವಾಗಿ ದೇವಾಲಯಗಳಲ್ಲಿ ಮೂಢನಂಬಿಕೆ, ಕಂದಾಚಾರ ಮತ್ತು ಶೋಷಣೆಗಳು ಮನೆಮಾಡುತ್ತಿವೆ. ನಮ್ಮ ಸನಾತನ ಪದ್ಧತಿಯಲ್ಲಿರುವ ವೈಜ್ಞಾನಿಕ ಮತ್ತು ವೈಚಾರಿಕ ಸತ್ಯಗಳ ಅರಿವಿನ ಕೊರತೆಯಿಂದಾಗಿ ಇಂದು ಮತಾಂತರದಂತಹ ಸವಾಲುಗಳೂ ಎದುರಾಗುತ್ತಿವೆ ಎಂದರು.
ಶಿಬಿರದ ಮುಖ್ಯ ಉದ್ದೇಶ ಈ ಎಲ್ಲಾ ಸಾಮಾಜಿಕ ಹಾಗೂ ಧಾರ್ಮಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಈ ಅರ್ಚಕರ ಪ್ರಶಿಕ್ಷಣ ಶಿಬಿರದ ಮುಖ್ಯ ಉದ್ದೇಶ. ಈ ಶಿಬಿರವು ಪೂಜಾರಿಗಳನ್ನು ಜ್ಞಾನವಂತರನ್ನಾಗಿ, ಪ್ರಬುದ್ಧರನ್ನಾಗಿ ರೂಪಿಸಲು ಸಹಕಾರಿ. ವೈಜ್ಞಾನಿಕ ಮತ್ತು ವೈಚಾರಿಕ ತಳಹದಿಯ ಮೇಲೆ ಮೂಢನಂಬಿಕೆ ಹಾಗೂ ಕಂದಾಚಾರ ಮುಕ್ತ ಧಾರ್ಮಿಕ ಪದ್ಧತಿಯನ್ನು ಬೆಳೆಸಲು ಪ್ರತಿಯೊಬ್ಬ ಅರ್ಚಕರೂ ಶ್ರಮಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ, ಷಡಕ್ಷರಪ್ಪ, ಚಂದ್ರಶೇಖರ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು










