ತುಮಕೂರು.ಆಗಸ್ಟ್.9: ಅನಾರೋಗ್ಯದಿಂದ ಚೇತರಿಸಿಕೊಂಡು ಹಾಸ್ಟೆಲ್ಗೆ ಮರಳಿದ್ದ ಎಂಟನೇ ತರಗತಿಯ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ಮನಕಲಕುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಸಂಭವಿಸಿದೆ.
ಕಾರಗಾನಹಟ್ಟಿ ನಿವಾಸಿಗಳಾದ ನರಸಿಂಹಮೂರ್ತಿ ಹಾಗೂ ಶಾರದಮ್ಮ ದಂಪತಿಯ ಪುತ್ರಿ, 13 ವರ್ಷದ ಪ್ರಿಯಾಂಕಾ ಮೃತ ದುರ್ದೈವಿ. ಈಕೆ ರಂಗಸಮುದ್ರದ ತ್ರಿಯಂಬಕೇಶ್ವರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ರಂಗಸಮುದ್ರ ಗ್ರಾಮದ ಕಸ್ತೂರ್ಬಾ ಗಾಂಧಿ ಬಾಲಕಿಯರ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದಳು.
ಕಳೆದ ಕೆಲ ದಿನಗಳಿಂದ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪ್ರಿಯಾಂಕಾ, ಸ್ವಗ್ರಾಮಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಳು. ಚೇತರಿಕೆಯ ಬಳಿಕ ಆಗಸ್ಟ್ 7ರಂದು ಮರಳಿ ಹಾಸ್ಟೆಲ್ಗೆ ಆಗಮಿಸಿದ್ದಳು. ಶನಿವಾರ ಮುಂಜಾನೆ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ಲೋ ಬಿಪಿಯಿಂದ ಕುಸಿದುಬಿದ್ದಿದ್ದಾಳೆ. ತಕ್ಷಣವೇ ಹಾಸ್ಟೆಲ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪಾವಗಡ ತಹಶೀಲ್ದಾರ್ ವೈ. ರವಿ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.









