ಮಾಸ್ಕೋ: ಉಕ್ರೇನ್ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಯುದ್ಧದಲ್ಲಿ ಇತರ ದೇಶಗಳು ಮಧ್ಯಪ್ರವೇಶಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ. ರಕ್ತಪಾತಕ್ಕೆ ಉಕ್ರೇನಿಯನ್ ಆಡಳಿತಗಾರರೇ ಕಾರಣ ಎಂದು ಅವರು ಹೇಳಿದರು.
ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ನಾಗರಿಕರ ರಕ್ಷಣೆಗೆ ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ. ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಬಾರದು ಎಂಬುದು ಅವರ ಬೇಡಿಕೆಯಾಗಿದೆ. ಆದಾಗ್ಯೂ ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ತಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿವೆ ಎಂದು ಅವರು ಹೇಳಿದರು.
ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಖಾರ್ಕಿನ್, ಒಡೆಸ್ಸಾ, ಮರಿಯುಪೋಲ್ನಲ್ಲಿ ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದೆ. ರಷ್ಯಾದ ಪಡೆಗಳು ಈಗಾಗಲೇ ಡಾನ್‌ಬಾಸ್‌ಗೆ ತಲುಪಿವೆ. ಡಾನ್ಬಾಸ್ನಲ್ಲಿ ಉಕ್ರೇನಿಯನ್ ಪಡೆಗಳನ್ನು ವಾಪಸು ತೆರಳುವಂತೆ ಮತ್ತು ಉಕ್ರೇನ್ ಸರ್ಕಾರವನ್ನು ಶರಣಾಗುವಂತೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಸರ್ಕಾರ ಈಗಾಗಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ರಷ್ಯಾ ಉಕ್ರೇನ್ ಮೇಲೆ 3 ಕಡೆ ಪಡೆಗಳನ್ನು ನಿಯೋಜಿಸಿದೆ. ಉಕ್ರೇನ್‌ನ ಗಡಿಗೆ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸಿಲಾಗಿದೆ. ವಾಯುಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಉಕ್ರೇನ್ ಈ ದಾಳಿಯನ್ನು ಹಿಮ್ಮೆಟ್ಟಿಸಲಾಗುತ್ತದೆ ಎಂದು ರಷ್ಯಾವನ್ನು ಎಚ್ಚರಿಸಿದೆ. ಈ ಯುದ್ಧದಲ್ಲಿ ರಷ್ಯಾದ ಮೇಲೆ ಗೆಲ್ಲುತ್ತದೆ ಎಂದು ಉಕ್ರೇನ್ ವಿಶ್ವಾಸ ವ್ಯಕ್ತಪಡಿಸಿದೆ.