ಚಿತ್ರದುರ್ಗ, (ಫೆಬ್ರವರಿ.23) : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಬುಧವಾರ ನಡೆದ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ತುರುವನೂರು ಹೋಬಳಿಯ 147 ಮಂದಿಗೆ ವಿವಿಧ ಯೋಜನೆಯಡಿ ಪಿಂಚಣಿ ಆದೇಶ ಪತ್ರವನ್ನು ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ವಿತರಿಸಿದರು.
ತುರುವನೂರು ಹೋಬಳಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ, 147 ಮಂದಿ ಪಿಂಚಣಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.
ನಂತರ ಮಾತನಾಡಿದ ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಬಡವರಿಗಾಗಿ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಇಂತಹ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳು ಜನರ ಜೀವನ ನಿರ್ವಹಣೆಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಫಲಾನುಭವಿಗಳಿಗೆ ಈ ಯೋಜನೆಯು ಸರಿಯಾಗಿ ತಲುಪುವಂತೆ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಬೇಕು. ರೂ.100 ರಿಂದ ಪ್ರಾರಂಭವಾಗಿದ್ದ ಸಾಮಾಜಿಕ ಭದ್ರತೆಯ ಪಿಂಚಣಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ, ಪ್ರಸ್ತುತ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಪ್ರಸ್ತುತವಾಗಿ ರೂ.800 ನೀಡಲಾಗುತ್ತಿದ್ದು, 65 ವರ್ಷ ಮೇಲ್ಪಟ್ಟ ಬಳಿಕ ರೂ.1200 ಪಿಂಚಣಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಯಾವುದೇ ಪಿಂಚಣಿ ಸಿಗುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಸಹ ನಮ್ಮ ಬಳಿ ಬಂದಿವೆ. ಹಾಗಾಗಿ ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಫಲಾನುಭವಿಗಳ ಮನೆ ಮನೆ ಬಾಗಿಲಿಗೆ ಹೋಗಿ ಖುದ್ದಾಗಿ ಸಮಸ್ಯೆ ಆಲಿಸಿ ಏಳು ದಿನಗಳ ಒಳಗೆ ಪರಿಹರಿಸುವಂತೆ ಸೂಚಿಸಿದರು.
ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಚಿಂತನೆಯಿಂದ ಕೆಲಸ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯಿರುವುದರಿಂದ ಅಧಿಕಾರಿಗಳು ಹಳ್ಳಿಗಳ ದೇವಸ್ಥಾನದಲ್ಲಿ ಸಭೆ ಮಾಡುವುದರ ಮೂಲಕ ಪಿಂಚಣಿಯ ಫಲಾನುಭವಿಗಳ ಕುಂದು-ಕೊರತೆಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.
ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಸಾಮಾಜಿಕವಾಗಿ, ಆರ್ಥಿಕವಾಗಿ ಜನರು ಅಭಿವೃದ್ಧಿ ಹೊಂದಲು ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ತುರುವನೂರು ಹೋಬಳಿಯಲ್ಲಿ ಸುಮಾರು 7500ಕ್ಕಿಂತ ಹೆಚ್ಚು ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಪಿಂಚಣಿ ಫಲಾನುಭವಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಸಿಗುವಂತೆ ಮಾಡುವುದೇ ಪಿಂಚಣಿ ಅದಾಲತ್‍ನ ಮುಖ್ಯ ಉದ್ದೇಶ. ಹೀಗಾಗಿ ಕಂದಾಯ ಇಲಾಖೆ ವತಿಯಿಂದ ಪ್ರತಿ ತಿಂಗಳು ಒಂದೊಂದು ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಮಾಡಲಾಗುತ್ತದೆ. ಈ ಯೋಜನೆಗಳಿಂದ ಸಾಕಷ್ಟು ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದರು.
ವಿಧವ ವೇತನದ ಫಲಾನುಭವಿಗಳಿಗೆ ಪ್ರಸ್ತುತವಾಗಿ ರೂ.600 ನೀಡಲಾಗುತ್ತಿದ್ದು, ಬಳಿಕ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ಜೋಡಣೆಯಿಂದ ವಿಧವಾ ವೇತನದ ಯೋಜನೆ ರದ್ಧಾಗಿ 65 ವರ್ಷದ ನಂತರ ವೃದ್ಧಾಪ್ಯ ವೇತನ ಯೋಜನೆ ಅಡಿಯಲ್ಲಿ ರೂ.1200 ರೂಪಾಯಿಗಳನ್ನು ನೀಡಲಾಗುತ್ತದೆ. ವೈದ್ಯರು ನೀಡುವ ವರದಿ ಆಧಾರದ ಮೇಲೆ ಪೂರ್ಣವಾಗಿ ಅಂಗವಿಕಲತೆಗೆ ಒಳಗಾಗಿರುವವರಿಗೆ ರೂ.2000 ವನ್ನು ನೀಡಲಾಗುತ್ತದೆ.
ಯಾರು ಸಹ ಈ ಯೋಜನೆಯಿಂದ ವಂಚಿತರಾಗಬಾರದು ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಪ್ರತಿ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಮನೆ ಮನೆಗೆ ಭೇಟಿ 100 ರಿಂದ 200 ಅರ್ಹ ಫಲಾನುಭವಿಗಳನ್ನು ಹುಡುಕಿ ಆದೇಶ ಪತ್ರಗಳನ್ನು ನೀಡುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸತ್ಯನಾರಾಯಣ್, ಗ್ರೇಡ್-2 ತಹಶೀಲ್ದಾರ್ ಬಿ.ಬಿ.ಫಾತೀಮಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಂಚಣಿ ಫಲಾನುಭವಿಗಳು ಇದ್ದರು.