ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 30 : ವಿಶ್ವಕರ್ಮ ಸಮುದಾಯದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆ.6 ರಿಂದ 9 ರವರೆಗೆ ನಾಲ್ಕು ದಿನಗಳ ಕಾಲ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಂ.ಶಂಕರಮೂರ್ತಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜದಲ್ಲಿ ಸಂಘಟನೆಯ ಕೊರತೆಯಿರುವುದರಿಂದ ಕ್ರೀಡೆಯ ಮೂಲಕವಾದರೂ ವಿಶ್ವಕರ್ಮ ಸಮಾಜದವರು ಒಂದೆಡೆ ಸೇರಿ ಸಂಘಟಿತರಾಗಲಿ ಎನ್ನುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
2004, 2012 ರಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಮೂರನೆ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ವಿಜೃಂಭಣೆಯಿಂದ ನಡೆಸಲಾಗುವುದು. ಆ.8 ರಂದು ಸಂಜೆ ನಾಲ್ಕು ಗಂಟೆಗೆ ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ತಂಡಗಳ ಮೆರವಣಿಗೆ ಹೊರಡಲಿದೆ ಎಂದರು.

ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಕಾರ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ ವಿಶ್ವಕರ್ಮ ಸಮಾಜದವರನ್ನು ಸಂಘಟಿಸಲು ಕ್ರೀಡೆ ಒಂದು ಸಾಧನ. ಕಾಯಕ ಸಮಾಜ ನಮ್ಮದು. ಎಲ್ಲಾ ರಂಗಗಳಲ್ಲಿಯೂ ಯುವಕರ ಪಾಲ್ಗೊಳ್ಳುವಿಕೆ ಕಡಿಮೆಯಿದೆ. ಆಧುನಿಕ ಜೀವನ ಶೈಲಿಯಿಂದ ಪ್ರತಿಯೊಬ್ಬರು ಒತ್ತಡದಲ್ಲಿದ್ದಾರೆ. ಒಟ್ಟು ಹದಿನಾರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.
ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಉಪಾಧ್ಯಕ್ಷ ಸತ್ಯನಾರಾಯಣಚಾರ್ ಮಾತನಾಡುತ್ತ ಮಧ್ಯಕರ್ನಾಟಕದಲ್ಲಿರುವ ವಿಶ್ವಕರ್ಮ ಸಮಾಜದವರನ್ನು ಒಂದೆಡೆ ಸೇರಿಸಿ ಸಂಘಟನೆಯಾಗುವಂತೆ ಜಾಗೃತಿ ಮೂಡಿಸುವುದಕ್ಕಾಗಿ ನಾಲ್ಕು ದಿನಗಳ ಕಾಲ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನಮ್ಮಲ್ಲಿ ಸಂಘಟನೆ ಕೊರತೆಯಿದೆ. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ನಾವುಗಳು ಕೂಡ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಿದೆ. ವಿಶ್ವಕರ್ಮ ಕಲಾವಿದರು ಸಂಕಷ್ಟದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಕಡೆಗಣಿಸುತ್ತಿವೆ. ಹಾಗಾಗಿ ನಾವುಗಳು ಒಗ್ಗಟ್ಟಾಬೇಕಿದೆ ಎಂದರು.
ಪ್ರವೀಣ್ ಎನ್, ಶ್ರೀನಿವಾಸ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಶಂಕರಾಚಾರ್, ಎಸ್.ಶ್ರೀಧರಾಚಾರಿ, ಶ್ಯಾಂಪ್ರಸಾದ್, ಪ್ರದೀಪ್ಕುಮಾರ್ ಎಸ್, ಸಂಜಯ್ ಡಿ. ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









