ಚಿತ್ರದುರ್ಗ | ಕರಿಯಣ್ಣನಹಳ್ಳಿಯಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ : ಕುಂದು ಕೊರತೆಗಳಿಗೆ ಸ್ಪಂದನೆ

1 Min Read

ಚಿತ್ರದುರ್ಗ, (ಫೆಬ್ರವರಿ.19) ; ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಕುಂದು-ಕೊರತೆಗಳನ್ನು ನಿವಾರಿಸಲು ಕಂದಾಯ ಇಲಾಖೆ ಅಧಿಕಾರಿಗಳಾದ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಫೆಬ್ರವರಿ 19 ರಂದು ಜಿಲ್ಲೆಯ ವಿವಿಧ ಕಡೆ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಚಿತ್ರದುರ್ಗ ತಾಲ್ಲೂಕಿನ ಕರಿಯಣ್ಣನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಗ್ರಾಮದಲ್ಲಿನ ಕುಂದು ಕೊರತೆಗಳಿಗೆ ಸ್ಪಂದನೆ ನೀಡಿದರು.

ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹೊಸ ಕೊಠಡಿ ಮಂಜೂರು ಮಾಡಬೇಕು, ಹಿರಿಯ ನಾಗರೀಕರಿಗೆ ಸೌಲಭ್ಯ ಕಲ್ಪಿಸಬೇಕು, ಗ್ರಾಮಸ್ಥರಿಗೆ ಸಾರಿಗೆ ವ್ಯವಸ್ಥೆಗಾಗಿ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರಂತರ ಜ್ಯೋತಿ ಸಂಪರ್ಕ ಒದಗಿಸಬೇಕು.

ಮನೆಯಿಲ್ಲದವರೆಗೆ ಮನೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಹಾಗೂ ಕಂದಾಯ ಇಲಾಖೆಯಿಂದ ಪೌತಿ ಖಾತೆ, ಹದ್ದುಬಸ್ತು, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ನೀಡಲು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಒದಗಿಸಬೇಕೆಂದು ಮನವಿ ಸಲ್ಲಿಸಿದರು. ಒಟ್ಟು  100ಕ್ಕಿಂತಲೂ ಹೆಚ್ಚು ಅರ್ಜಿಗಳು ಗ್ರಾಮಸ್ಥರಿಂದ ಸ್ವೀಕೃತವಾದವು.

ಈ ವೇಳೆ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಆಯಾ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿ ಆಯಾ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ವರ್ಗಾಯಿಸುವ ಮೂಲಕ ತ್ವರಿತವಾಗಿ ಇತ್ಯರ್ಥ ಮಾಡಬೇಕೆಂದು ಸೂಚಿಸಿದರು.

ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆಯಡಿ ಮಂಜೂರಾತಿ ಆದೇಶ ನೀಡಿದರು. ಶಾಲಾ ಸಮವಸ್ತ್ರ, ಮಾತೃವಂದನಾ, ಶ್ರವಣದೋಷ ಯಂತ್ರ ವಿತರಿಸಿದರು. ಗ್ರಾಮ ವಾಸ್ತವ್ಯದಲ್ಲಿ ತಹಶೀಲ್ದಾರ್ ಸತ್ಯನಾರಾಯಣ್, ಡಿಡಿಪಿಐ ರವಿಶಂಕರ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *