ಬೆಳ್ತಂಗಡಿ: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳ ಪೊಲೀಸ್ ಠಾಣೆಯ ‘ಬುರುಡೆ ಷಡ್ಯಂತ್ರ’ (ಮೊಕದ್ದಮೆ ಸಂಖ್ಯೆ 39/2025) ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (SIT) ಪೂರ್ಣಗೊಳಿಸಿದ್ದು, ಬೆಳ್ತಂಗಡಿ ನ್ಯಾಯಾಲಯಕ್ಕೆ 7,005 ಪುಟಗಳ ಬೃಹತ್ ಅಂತಿಮ ವರದಿಯನ್ನು ಸಲ್ಲಿಸಿದೆ.ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳ ತಂಡವು ಇಂದು ಮಧ್ಯಾಹ್ನ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ನ್ಯಾಯಾಲಯಕ್ಕೆ ಹಾಜರಾಗಿ, 12 ಸಂಪುಟಗಳಲ್ಲಿ ಸಿದ್ಧಪಡಿಸಿದ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿತು.
ಈ ಅಂತಿಮ ವರದಿಯಲ್ಲಿ ಈ ಹಿಂದೆ ಸಲ್ಲಿಸಲಾಗಿದ್ದ 3,923 ಪುಟಗಳ ವರದಿ ಹಾಗೂ ಇದೀಗ ಸಿದ್ಧಪಡಿಸಲಾದ 3,082 ಪುಟಗಳ ಹೆಚ್ಚುವರಿ ವರದಿ ಸೇರಿ ಒಟ್ಟು 7,005 ಪುಟಗಳ ದಾಖಲೆಗಳು ಒಳಗೊಂಡಿವೆ.ಕಳೆದ ವರ್ಷದ ನವೆಂಬರ್ 20ರಂದು ಎಸ್ಐಟಿ ಅಧಿಕಾರಿಗಳು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 215ರಡಿ ಸುಳ್ಳು ಸಾಕ್ಷ್ಯ (Perjury) ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತನಿಖೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಾಜಿ ‘ಮಾಸ್ಕ್ ಮ್ಯಾನ್’ ಸಿ.ಎನ್. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ್ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ದೋಷಾರೋಪ ಮಾಡಲಾಗಿದೆ.
ಅಂತಿಮ ವರದಿ ಸಲ್ಲಿಸುವ ವೇಳೆ ಎಸ್ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್ಪೆಕ್ಟರ್ಗಳಾದ ಕುಸುಮಾಧರ್, ಮಂಜುನಾಥ್ ಹಾಗೂ ತನಿಖಾ ತಂಡದ ಅಧಿಕಾರಿಗಳು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಪ್ರಕರಣದ ಪ್ರಮುಖ ಆರೋಪಿ ಸಿ.ಎನ್. ಚಿನ್ನಯ್ಯ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಗಮನಾರ್ಹವಾಗಿ, 2025ರ ಆಗಸ್ಟ್ 23ರಂದು ಎಸ್ಐಟಿ ಚಿನ್ನಯ್ಯ ಸೇರಿದಂತೆ ಆರೋಪಿಗಳನ್ನು ಬಂಧಿಸಿತ್ತು. ಇದೀಗ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಪ್ರಕರಣದ ಮುಂದಿನ ವಿಚಾರಣೆ ಹಾಗೂ ನ್ಯಾಯಾಂಗ ಪ್ರಕ್ರಿಯೆ ಮಹತ್ವದ ಹಂತಕ್ಕೆ ಪ್ರವೇಶಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







