ಚಿತ್ರದುರ್ಗ,ಜುಲೈ.15 : ಯಾವಾಗಲೂ ಮತ್ತು ಯಾವುದೇ ಪರಿಸ್ಥಿತಿಗೂ ಪ್ರಸ್ತುತವಾಗಿ ಉಳಿಯಬೇಕಾದರೆ ಕೌಶಲ್ಯ ನಿರಂತರವಾಗಿ ಉನ್ನತೀಕರಿಸಿಕೊಳ್ಳುವುದು ಅತ್ಯಗತ್ಯ. ಇದೇ ಯಶಸ್ಸಿನ ನಿಜವಾದ ಗುಟ್ಟು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ತಿಳಿಸಿದರು.
ನಗರದ ರುಡ್‍ಸೆಟ್ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೈನಂದಿನ ಜೀವನದ ಕೆಲಸಗಳ ಜೊತೆಗೆ ಸೃಜನಾತ್ಮಕವಾಗಿ ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಕೌಶಲ್ಯಕ್ಕೆ ಯಾವುದೇ ಕಾಲಮಿತಿಯಿಲ್ಲ. ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೆಲಸ ಮಾಡಿದಾಗ ಕೌಶಲ್ಯ ವೃದ್ಧಿಯಾಗುತ್ತದೆ. ಇದು ನಮಗೆ ನಾವೇ ಕೊಟ್ಟುಕೊಳ್ಳುವ ದೊಡ್ಡ ಉಡುಗೊರೆ. ಇಂದಿನ ಯುವಸಮುದಾಯ ಕೇವಲ ಪದವೀಧರರಾದರೆ ಸಾಲದು, ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯೋಗಗಳಿಗೆ ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಿದ್ದರಾಮ ಬಿ. ಪಾಟೀಲ ಮಾತನಾಡಿ, ಜೀವನದಲ್ಲಿ ಏಳಿಗೆ ಸಾಧಿಸಲು ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಮುಖ್ಯ. ಅರಿವಿನ ಕೌಶಲ್ಯಗಳು, ತಾಂತ್ರಿಕ ಕೌಶಲ್ಯಗಳು ಹಾಗೂ ಪರಸ್ಪರ ಸಂವಹನ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದರಿಂದ ವೃತ್ತಿಯಲ್ಲಿ ದಕ್ಷತೆ ಮತ್ತು ನೈಪುಣ್ಯತೆಯನ್ನು ಸಾಧಿಸಬಹುದು ಎಂದು ಸಲಹೆ ನೀಡಿದರು.
ರುಡ್‍ಸೆಟ್ ಸಂಸ್ಥೆಯಿಂದ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡು, ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಯುವ ಉದ್ಯಮಿಗಳಾದ ಅಭಿಷೇಕ್, ತಿಪ್ಪೇಸ್ವಾಮಿ, ಮಧುಕೇಶವ, ಇಂದುಪ್ರಸಾದ, ವರ್ಷಿಣಿ, ಶ್ವೇತಾ, ಉಮಾದೇವಿ ಮತ್ತು ಪಾರ್ವತಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ಬಸವರಾಜ್ ಅಶೋಕಪ್ಪ ಎಚ್.ಟಿ. ಮಾತನಾಡಿ, ಕೆಲಸದಲ್ಲಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ಜಯಲಕ್ಷ್ಮಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ. ಪ್ರವೀಣ್, ಎನ್‍ಆರ್‍ಎಲ್‍ಎಂ ಜಿಲ್ಲಾ ವ್ಯವಸ್ಥಾಪಕ ಯೋಗೇಶ್ವರಪ್ಪ ಉಪಸ್ಥಿತರಿದ್ದರು. ರುಡ್‍ಸೆಟ್ ಸಂಸ್ಥೆಯ ಉಪನ್ಯಾಸಕ ತೋಟಪ್ಪ ಎಸ್. ಗಾಣಿಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಮೊಬೈಲ್ ರಿಪೇರಿ ಮತ್ತು ಮೋಟಾರ್ ರಿವೈಂಡಿಂಗ್ ತರಬೇತಿಯ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









