ನವದೆಹಲಿ: ರೈಲಿನಲ್ಲಿ ದೂರದ ಪ್ರಯಾಣ ಮಾಡುವವರಿಗೆ ಆಹಾರದ ಸಮಸ್ಯೆ ಇನ್ನು ಬಹುತೇಕ ನಿವಾರಣೆಯಾಗಲಿದೆ. ಜನಪ್ರಿಯ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ (Swiggy) ತನ್ನ ‘Food on Train’ ಸೇವೆಯನ್ನು ದೇಶದಾದ್ಯಂತ ಮತ್ತಷ್ಟು ವಿಸ್ತರಿಸಿದ್ದು, ಇದೀಗ 180ಕ್ಕೂ ಹೆಚ್ಚು ನಗರಗಳ ರೈಲು ನಿಲ್ದಾಣಗಳಲ್ಲಿ ಈ ಸೇವೆ ಲಭ್ಯವಾಗಿದೆ. ಕರ್ನಾಟಕದ ದಾವಣಗೆರೆ ಸೇರಿದಂತೆ ರಾಜ್ಯದ 17 ರೈಲು ನಿಲ್ದಾಣಗಳು ಹೊಸದಾಗಿ ಈ ಸೇವೆಗೆ ಸೇರ್ಪಡೆಯಾಗಿವೆ.
ಈ ಸೇವೆಯ ಮೂಲಕ ಪ್ರಯಾಣಿಕರು ತಮ್ಮ ನೆಚ್ಚಿನ ಹೋಟೆಲ್‌ನಿಂದ ಆಹಾರವನ್ನು ನೇರವಾಗಿ ರೈಲಿನಲ್ಲಿರುವ ತಮ್ಮ ಸೀಟಿಗೇ ಪಡೆಯಬಹುದು. ರೈಲು ನಿಲ್ದಾಣದಲ್ಲಿ ಇಳಿದು ಆಹಾರ ಖರೀದಿಸುವ ಆತಂಕವಿಲ್ಲದೆ, ಸುಲಭವಾಗಿ ಮೊಬೈಲ್ ಮೂಲಕವೇ ಆರ್ಡರ್ ಮಾಡಬಹುದು.
‘Scan Your Ticket’ ಹೊಸ ವೈಶಿಷ್ಟ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಿಗ್ಗಿ ಹೊಸ ‘Scan Your Ticket’ ಫೀಚರ್ ಪರಿಚಯಿಸಿದೆ. ಬಳಕೆದಾರರು ಸ್ವಿಗ್ಗಿ ಆ್ಯಪ್‌ನಲ್ಲಿ ತಮ್ಮ ರೈಲು ಟಿಕೆಟ್‌ನ ಫೋಟೋ ಅಪ್‌ಲೋಡ್ ಮಾಡಿದರೆ ಸಾಕು. ಆ್ಯಪ್ ಸ್ವಯಂಚಾಲಿತವಾಗಿ PNR ಸಂಖ್ಯೆ, ಬೋಗಿ ಹಾಗೂ ಸೀಟ್ ವಿವರಗಳನ್ನು ಗುರುತಿಸಿ, ಆಯ್ಕೆ ಮಾಡಿದ ರೈಲು ನಿಲ್ದಾಣದಲ್ಲಿ ಆಹಾರವನ್ನು ನೇರವಾಗಿ ಪ್ರಯಾಣಿಕರ ಸೀಟಿಗೆ ತಲುಪಿಸುತ್ತದೆ.
ಸೇವೆಗೆ ಭಾರಿ ಬೇಡಿಕೆ
ಬೇಸಿಗೆ ರಜೆಯ ಅವಧಿಯಲ್ಲಿ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಏಪ್ರಿಲ್‌ನಿಂದ ಜೂನ್ 2026ರವರೆಗೆ ‘Food on Train’ ಆರ್ಡರ್‌ಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳ ಕಂಡಿವೆ. ಒಂದೇ PNR ಬಳಸಿ ಪ್ರಯಾಣದ ವೇಳೆ ಎರಡು ಅಥವಾ ಮೂರು ವಿಭಿನ್ನ ನಿಲ್ದಾಣಗಳಲ್ಲಿ ಆಹಾರ ಆರ್ಡರ್ ಮಾಡುವವರ ಸಂಖ್ಯೆಯೂ ಸುಮಾರು 300 ಶೇಕಡಾ ಹೆಚ್ಚಾಗಿದೆ.
ರೈಲು ಪ್ರಯಾಣಿಕರ ನೆಚ್ಚಿನ ತಿನಿಸುಗಳು
ಸ್ವಿಗ್ಗಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ:
4 ಲಕ್ಷಕ್ಕೂ ಹೆಚ್ಚು ರೊಟ್ಟಿಗಳು (ತವಾ ರೊಟ್ಟಿ, ತಂದೂರಿ ರೊಟ್ಟಿ, ಫುಲ್ಕಾ) ಆರ್ಡರ್ ಆಗಿವೆ.
ಚಿಕನ್ ಬಿರಿಯಾನಿ ಅತ್ಯಧಿಕ ಆರ್ಡರ್ ಪಡೆದ ಮಾಂಸಾಹಾರಿ ಖಾದ್ಯವಾಗಿದೆ.
ಮಸಾಲೆ ದೋಸೆ, ಆಲೂ ಪರೋಟ, ಬರ್ಗರ್ ಕೂಡ ಹೆಚ್ಚು ಜನಪ್ರಿಯವಾಗಿವೆ.
ಬೇಸಿಗೆಯಲ್ಲಿ ಮ್ಯಾಂಗೋ ಶೇಕ್, ಲಸ್ಸಿ ಹಾಗೂ ಐಸ್‌ಕ್ರೀಮ್ ಆರ್ಡರ್‌ಗಳಲ್ಲಿ ಭಾರೀ ಏರಿಕೆ ದಾಖಲಾಗಿದೆ.
ಪ್ರದೇಶಕ್ಕೊಂದು ವಿಭಿನ್ನ ರುಚಿ
ಉತ್ತರ ಭಾರತದಲ್ಲಿ ರೊಟ್ಟಿ, ಪರೋಟ ಮತ್ತು ಬರ್ಗರ್‌ಗೆ ಹೆಚ್ಚಿನ ಬೇಡಿಕೆ ಕಂಡುಬಂದರೆ, ದಕ್ಷಿಣ ಭಾರತದಲ್ಲಿ ದೋಸೆ ಅತಿ ಹೆಚ್ಚು ಆರ್ಡರ್ ಆಗಿದೆ. ವಿಜಯವಾಡದಲ್ಲಿ ಪ್ರತಿ ಐದು ಆರ್ಡರ್‌ಗಳಲ್ಲಿ ಒಂದು ಬಿರಿಯಾನಿ ಆಗಿದ್ದು, ಗೋವಾ ಮಾರ್ಗದ ಮಡಗಾಂವ್ ಜಂಕ್ಷನ್ನಲ್ಲಿ ಬಿರಿಯಾನಿಗಿಂತ ಬರ್ಗರ್‌ಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಹಲ್ದಿರಾಮ್ಸ್, ಪ್ಯಾರಡೈಸ್ ಬಿರಿಯಾನಿ ಹಾಗೂ ಅಡ್ಯಾರ್ ಆನಂದ ಭವನ (A2B) ರೈಲು ಪ್ರಯಾಣಿಕರು ಹೆಚ್ಚು ಆಯ್ಕೆ ಮಾಡಿರುವ ಆಹಾರ ಮಳಿಗೆಗಳಾಗಿವೆ.
ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಈ ಸೇವೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಮೆಟ್ರೋ ನಗರಗಳಷ್ಟೇ ಅಲ್ಲದೆ ಸಣ್ಣ ಪಟ್ಟಣಗಳಲ್ಲಿಯೂ ಡಿಜಿಟಲ್ ಆಹಾರ ಆರ್ಡರ್ ಮಾಡುವ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ. ಪ್ರಯಾಣಕ್ಕೂ ನಾಲ್ಕು ದಿನಗಳ ಮುಂಚಿತವಾಗಿಯೇ ಆಹಾರ ಬುಕ್ ಮಾಡುತ್ತಿರುವುದು ಈ ಸೇವೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.











