ದೆಹಲಿ.ಜುಲೈ.08: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮೊಬೈಲ್, ಲ್ಯಾಪ್ಟಾಪ್‌ಗಳಂತಹ ಡಿಜಿಟಲ್ ಪರದೆಗಳ (Screens) ಬಳಕೆ ನಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಆದರೆ, ಅತಿಯಾದ ಸ್ಕ್ರೀನ್ ಟೈಮ್ ಮಾನಸಿಕ ಆಯಾಸ, ನೆನಪಿನ ಶಕ್ತಿಯ ಕೊರತೆ ಮತ್ತು ಏಕಾಗ್ರತೆಯ ನಷ್ಟಕ್ಕೆ ಕಾರಣವಾಗುತ್ತಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಕೆಲಸ, ಶಿಕ್ಷಣ ಮತ್ತು ಸಂವಹನಕ್ಕಾಗಿ ಡಿಜಿಟಲ್ ಸಾಧನಗಳು ಅನಿವಾರ್ಯವಾಗಿರುವುದರಿಂದ ಸ್ಕ್ರೀನ್ ಟೈಮ್ ಅನ್ನು ಸಂಪೂರ್ಣವಾಗಿ ನಿಷೇಧಿಸುವುದು ಸಾಧ್ಯವಿಲ್ಲ.
ಆದರೆ, ನಾವು ಪರದೆಯನ್ನು ಹೇಗೆ ಬಳಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಸ್ಕ್ರೀನ್ ಟೈಮ್ ಅನ್ನು ಮುಖ್ಯವಾಗಿ ನಿಷ್ಕ್ರಿಯ (Passive) ಮತ್ತು ಸಕ್ರಿಯ (Active) ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಯಾವುದು ನಮ್ಮ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಡಿಮೆನ್ಶಿಯಾ (ಮರೆವು ರೋಗ) ತಜ್ಞರು ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್ ಕೆಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಏನಿದು ನಿಷ್ಕ್ರಿಯ ಸ್ಕ್ರೀನ್ ಟೈಮ್
ಯಾವುದೇ ಯೋಚನೆ ಇಲ್ಲದೆ, ಮೆದುಳಿಗೆ ಕೆಲಸ ನೀಡದೆ ಸೋಷಿಯಲ್ ಮೀಡಿಯಾಗಳನ್ನು ಸ್ಕ್ರಾಲ್ ಮಾಡುವುದು, ಆಟೋ-ಪ್ಲೇ ಆಗುವ ವಿಡಿಯೋಗಳನ್ನು ನೋಡುತ್ತಾ ಇರುವುದು ಅಥವಾ ಹಿನ್ನೆಲೆಯಲ್ಲಿ ಏನೋ ಒಂದು ಪ್ಲೇ ಆಗುತ್ತಿರುವುದನ್ನು ಸುಮ್ಮನೆ ವೀಕ್ಷಿಸುವುದನ್ನು ‘ನಿಷ್ಕ್ರಿಯ ಸ್ಕ್ರೀನ್ ಟೈಮ್’ ಎನ್ನಲಾಗುತ್ತದೆ.
ಇನ್ ಸ್ಟಂಟ್ ಗ್ರಾಟಿಫಿಕೇಶನ್ (ತತ್ ಕ್ಷಣದ ತೃಪ್ತಿ) ಎಂಬ ವ್ಯಸನ
ಜನರು ಈ ನಿಷ್ಕ್ರಿಯ ಬಳಕೆಗೆ ಅಡಿಕ್ಟ್ ಆಗಲು ಮುಖ್ಯ ಕಾರಣ ‘ಕಡಿಮೆ ಶ್ರಮಕ್ಕೆ ಸಿಗುವ ತತ್ ಕ್ಷಣದ ಸಂತೋಷ’. ಒಂದು ಸಣ್ಣ ರೀಲ್ ನೋಡಿ ನಗುವುದು, ವಿಡಿಯೋದ ಕೊನೆಯಲ್ಲಿ ಏನಾಗಬಹುದು ಎಂಬ ಕುತೂಹಲ ಇತ್ಯಾದಿ ಮೆದುಳಿಗೆ ತಕ್ಷಣದ ರಿವಾರ್ಡ್ ನೀಡುತ್ತದೆ. ಇತ್ತೀಚಿನ 2x ಸ್ಪೀಡ್‌ನಲ್ಲಿ ವಿಡಿಯೋ ನೋಡುವ ಅಭ್ಯಾಸವು ಜನರ ತಾಳ್ಮೆಯನ್ನು ಕೆಡಿಸುತ್ತಿದ್ದು, ಅರಿವಿನ ಆಯಾಸ ಮತ್ತು ಕೆಲಸಗಳಲ್ಲಿ ಬೇಗನೆ ಬೇಸರಗೊಳ್ಳುವಂತೆ ಮಾಡುತ್ತಿದೆ.
ಸಕ್ರಿಯ ಸ್ಕ್ರೀನ್ ಟೈಮ್ (Active Screen Time) ಎಂದರೇನು? ಅದು ಹೇಗೆ ಒಳ್ಳೆಯದು?
ಸ್ಕ್ರೀನ್ ಬಳಕೆ ಕೇವಲ ಕಡು ನಕಾರಾತ್ಮಕವಲ್ಲ; ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮೆದುಳನ್ನು ಚುರುಕುಗೊಳಿಸಬಹುದು. ಯಾವುದಾದರೂ ಒಂದು ಉದ್ದೇಶವನ್ನು ಇಟ್ಟುಕೊಂಡು, ಕಲಿಯಲು ಅಥವಾ ಸಮಸ್ಯೆಗಳನ್ನು ಪರಿಹರಿಸಲು ಡಿಜಿಟಲ್ ಸಾಧನಗಳನ್ನು ಬಳಸುವುದನ್ನು ‘ಸಕ್ರಿಯ ಸ್ಕ್ರೀನ್ ಟೈಮ್’ ಎನ್ನಲಾಗುತ್ತದೆ.
ಇದು ಭವಿಷ್ಯದಲ್ಲಿ ಮರೆವು ರೋಗಕ್ಕೆ ಕಾರಣವಾಗಬಹುದೇ?
ವಯಸ್ಸಾಗುತ್ತಿದ್ದಂತೆ ಕಾಡುವ ಡಿಮೆನ್ಶಿಯಾದಂತಹ ನರಸಂಬಂಧಿ ಕಾಯಿಲೆಗಳು ಜಗತ್ತಿನಾದ್ಯಂತ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಕ್ರೀನ್ ಟೈಮ್ ಮತ್ತು ಮೆದುಳಿನ ಆರೋಗ್ಯದ ನಡುವಿನ ಸಂಬಂಧ ಮಹತ್ವದ್ದಾಗಿದೆ.











