ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 03 : ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಕ್ಕಳ ಚಲನಚಿತ್ರಗಳು ಇಂದಿನ ಅಗತ್ಯವಾಗಿದ್ದು, ಇಂತಹ ಚಿತ್ರಗಳ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಲು ಸಾಧ್ಯ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅಭಿಪ್ರಾಯಪಟ್ಟರು.
ನಗರದ ರಂಗಯ್ಯನ ಬಾಗಿಲಿನಲ್ಲಿರುವ ಮದಕರಿ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ “ಅಪ್ರತಿಮ” ಮಕ್ಕಳಚಿತ್ರದ ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಅವರು ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗಾಗಿ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಚಿತ್ರಗಳ ಸಂಖ್ಯೆ ಹೆಚ್ಚಾಗಬೇಕಿದೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಚಿತ್ರದುರ್ಗದ ಹುಡುಗರ “ಅಪ್ರತಿಮ” ಚಿತ್ರ ಯಶಸ್ಸು ಕಾಣಲಿ. ಮಕ್ಕಳ ಪ್ರತಿಭೆಗೆ ವೇದಿಕೆಯಾಗುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗಲಿ ಎಂದು ಶುಭ ಹಾರೈಸಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ. ಸರ್ದಾರ್, ಮಾತನಾಡಿ ಮಕ್ಕಳ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಚಲನಚಿತ್ರಗಳು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗುತ್ತವೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸೃಜನಶೀಲತೆಯನ್ನು ಬೆಳೆಸುವ ಇಂತಹ ಪ್ರಯತ್ನಗಳಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದರು.
“ಅಪ್ರತಿಮ” ಚಿತ್ರದ ನಿರ್ದೇಶಕ ದೇವರತ್ನ ಮಂಜು ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ಉತ್ತಮ ಮೌಲ್ಯಗಳು, ಶಿಕ್ಷಣದ ಮಹತ್ವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡುವ ಉದ್ದೇಶದಿಂದ “ಅಪ್ರತಿಮ” ಮಕ್ಕಳಚಿತ್ರವನ್ನು ನಿರ್ಮಿಸಲಾಗುತ್ತಿದೆ, ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಮಾನವೀಯತೆ, ಪರಿಸರ ಸಂರಕ್ಷಣೆ, ಪೋಷಕರ ಗೌರವ ಹಾಗೂ ಸರ್ಕಾರಿ ಶಾಲೆಗಳ ಮಹತ್ವದಂತಹ ಸಾಮಾಜಿಕ ಸಂದೇಶಗಳನ್ನು ಸಾರಲಿದೆ. ಎಂದರು.
ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಾಲತೇಶ್ ಅರಸ್ ಮಾತನಾಡಿ, ಸಮಾಜ ಪರಿವರ್ತನೆಗೆ ಶಿಕ್ಷಣ ಮತ್ತು ಚಲನಚಿತ್ರ ಎರಡೂ ಪರಿಣಾಮಕಾರಿ ಮಾಧ್ಯಮಗಳಾಗಿದ್ದು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಂತಹ ಚಿತ್ರಗಳು ಹೆಚ್ಚು ನಿರ್ಮಾಣವಾಗಬೇಕಾಗಿದೆ. “ಅಪ್ರತಿಮ” ಚಿತ್ರವು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನವಾಗಿದೆ. ಈ ಚಿತ್ರ ಯಶಸ್ವಿಯಾಗಿ ಮೂಡಿಬಂದು ಪ್ರತಿಯೊಬ್ಬ ಮಕ್ಕಳಿಗೆ ಮಾದರಿಯಾಗಲಿ ಎಂದರು.
ಚಿತ್ರತಂಡದ ಕ್ರಿಯೇಟಿವ್ ಹೆಡ್ ಕೊಕೊನಟ್ ಬಸವರಾಜ್ ಮಾತನಾಡಿ,, “ಅಪ್ರತಿಮ” ಮಕ್ಕಳಚಿತ್ರವು ಯಶಸ್ವಿಯಾಗಿ ಮೂಡಿಬಂದು ಸಮಾಜದಲ್ಲಿ ವಿಶಿಷ್ಟ ಸ್ಥಾನ ಪಡೆದು, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರವಾಗಿ ಹೊರಹೊಮ್ಮಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಜಾಕಿರ್ ಹುಸೇನ್, ಮುನ್ನಾ, ವಸೀಂ, ನಗರಸಭೆಯ ಮಾಜಿ ಸದಸ್ಯ ಸಿ.ಟಿ. ಕೃಷ್ಣಮೂರ್ತಿ, ಹೆಚ್ .ಜೀವನ್ , ನಂದಿಪುರ ನಾಗರಾಜ್, ಬಾಲ ಕಲಾವಿದರಾದ ಸಂದೀಪ್, ವಿಖ್ಯಾತ್ ಅರಸ್, ಸಮೃದ್, ಜಿ.ಡಿ. ಪ್ರಣವಿ, ಸಿಂಚನ, ಹಿತಾಕ್ಷರ, ನಶ್ನೀನ್ ಅವರಿಗೆ ಗಣ್ಯರು ಶುಭಾಶಯ ಕೋರಿದರು.




















