ಚಿತ್ರದುರ್ಗ, (ಫೆ.12) : ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಣಗೊಳಿಸಲು ಬೇಕಾಗಿರುವ ಅಗತ್ಯ ಅನುದಾನವನ್ನು ಕಾಲಕಾಲಕ್ಕೆ ಒದಗಿಸಬೇಕು. ಕಾಲುವೆ ನಿರ್ಮಾಣಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು, ವಿವಿ ಸಾಗರಕ್ಕೆ ಹೆಚ್ಚುವರಿಯಾಗಿ ಮೂರು ಟಿಎಂಸಿ ನೀರನ್ನು ಹಂಚಿಕೆ ಮಾಡಲು ಸಾಧ್ಯವಿರುವ ಮಾರ್ಗಗಳ ಹುಡುಕಲು ಸರ್ಕಾರ ಮುಂದಾಗಬೇಕೆಂಬ ಪ್ರಮುಖ ನಿರ್ಣಯಗಳನ್ನು ಶನಿವಾರ ಇಲ್ಲಿ ಸಮಾವೇಶಗೊಂಡಿದ್ದ ನೀರಾವರಿ ಹೋರಾಟ ಸಮಿತಿ ಸಭೆ ಕೈಗೊಂಡಿತು. ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.
ತೀರಾ ಹಿಂದುಳಿದಿರುವ ಮೊಳಕಾಲ್ಮುರು ತಾಲೂಕಿಗೆ ಭದ್ರಾ ಮೇಲ್ದಂಡೆ ಹೆಚ್ಚು ಅನುಕೂಲವಾಗುತ್ತಿಲ್ಲ. ಮೊಳಕಾಲ್ಮುರು ತಾಲೂಕು ಪ್ರಧಾನವಾಗಿರಿಸಿಕೊಂಡು ಹೋರಾಟ ಕಟ್ಟಲಾಗಿತ್ತು. ಪಕ್ಕುರ್ತಿ ಕೆರೆಗೆ ನೀರು ಹರಿದು ಬರುತ್ತಿಲ್ಲ. ಪ್ರಮುಖ ಹತ್ತು ಕೆರೆಗಳಿಗೆ ನೀರು ಪೂರೈಕೆ ಮಾಡಬೇಕು. ರಂಗಯ್ಯನದುರ್ಗ ಜಲಾಶಯದಲ್ಲಿ ಸದಾ ನೀರಿರುವಂತೆ ನೋಡಿಕೊಳ್ಳಬೇಕೆಂಬ ಅಹವಾಲನ್ನು ಹೋರಾಟ ಸಮಿತಿಯ ಮೊಳಕಾಲ್ಮುರು ತಾಲೂಕಿನ ಮುಖಂಡ ರಾಂಪುರ ನಾಗರಾಜ್ ಸಭೆ ಗಮನಕ್ಕೆ ತಂದರು. ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯನ್ನು ಭದ್ರಾ ಮೇಲ್ದಂಡೆಯಡಿ ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷಿಸಲಾಗಿದೆ. ವಿವಿ ಸಾಗರದಿಂದ ಪರ್ಯಾಯ ಮಾರ್ಗದ ಮೂಲಕ ಹೋಬಳಿಯ ಎಲ್ಲ ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡಬೇಕು. ಈ ಸಂಬಂಧದ ಪ್ರಸ್ತಾವನೆ ಮುಖ್ಯಮಂತ್ರಿಗಳ ಬಳಿ ಇದ್ದು ಅನುಮೋದನೆಗೆ ಶ್ರಮಿಸುವಂತೆ ಹರಿಯಬ್ಬೆ ಹೆಂಜಾರಪ್ಪ ಹಾಗೂ ಕೆ.ಸಿ.ಹೊರಕೇರಪ್ಪ ಸಭೆ ಗಮನಕ್ಕೆ ತಂದರು.
ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡ ರೈತರಿಗೆ ಪರಿಹಾರ ನೀಡವಲ್ಲಿ ವಿಳಂಬವಾಗುತ್ತಿದೆ. ರೈತರು ಹಲವಾರು ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಭದ್ರಾ ಮೇಲ್ದಂಡೆಗೆ ಭೂ ಸ್ವಾಧಿನವೇ ತೊಡಕಾಗಿದೆ. ರಾಷ್ಟ್ರೀಯ ಯೋಜನೆಗೆ ಅಂದ್ರ ಆಡ್ಡಗಾಲು ಹಾಕಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ಯೋಜನೆಗೆ ಶಿಫಾರಸ್ಸು ಮಾಡಿದ ನಂತರ ಒಂದು ಪೈಸೆ ಅನುದಾನ ಬಿಡುಗಡೆ ಮಾಡಲಾಗಿಲ್ಲವೆಂದು ಎಂ.ಎನ್.ಅಹೋಬಲಪತಿ ಅಸಮಧಾನ ವ್ಯಕ್ತಪಡಿಸಿದರು.
ಜಗಳೂರು ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಪ್ರಕ್ರಿಯೆ ನಿಧಾನಗತಿಯಲ್ಲಿದೆ. 2.40 ಟಿಎಂಸಿ ನೀರು ಪೂರೈಕೆ ಮಾಡಲು ಡಿಪಿಆರ್ ತಯಾರಿಸಲಾಗಿದೆ. ಕೊಳವೆ ಮಾರ್ಗ ರೂಪಿಸುವ ಟೆಂಡರ್ ಕರೆಯಲಾಗಿದ್ದರೂ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿಗಳು ದೊರೆಯುತ್ತಿಲ್ಲವೆಂದು ಸಮಿತಿಯ ಜಗಳೂರು ಯಾದವರೆಡ್ಡಿ ಸಭೆ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣವೇ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವನ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಕೋದಂಡರಾಮಯ್ಯ ವಿಳಂಬಕ್ಕೆ ಮಾಹಿತಿ ಪಡೆದರು. ಕೊಳವೆ ಮಾರ್ಗ ರೂಪಿಸಲು ಸರ್ವೆ ಕಾರ್ಯ ನಡೆಯುತ್ತಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿವೆ. ಮೂರು ಕಂಪನಿಗಳು ಟೆಂಡರ್ ಪಡೆದಿರುವ ಮಾಹಿತಿಯ ಸಭೆಗೆ ತಿಳಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿ ಅಜ್ಜಂಪುರ ಸಮೀಪ 1.9 ಕಿಮೀ ನಷ್ಟು ಭೂಮಿ ಸ್ವಾಧೀನ ಪ್ರಕ್ರಿಯೆಗೆ ರೈತರು ಅಡ್ಡಗಾಲು ಹಾಕಿದ್ದಾರೆ. ಇದರಿಂದಾಗಿ 53 ಕಿಮಿ ಉದ್ದದ ಕಾಲುವೆ ತೊಡಕಾಗಿದೆ. ಈ ವಿವಾದ ಬಗೆಹರಿಸಿದರೆ ಬೇಗ ನೀರು ಪರಿದು ಬರುತ್ತದೆ. ಸಂಬಂಧಿಸಿದ ಉಪ ವಿಭಾಗಾಧಿಕಾರಿ ಬಳಿ ಮಾತನಾಡಿ ವಿವಾದ ಶೀಘ್ರ ಬಗೆಹರಿಸಬೇಕೆಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಪಿ.ಕೋದಂಡರಾಮಯ್ಯ ಕಂದಾಯ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಳಿ ಮಾತನಾಡುವುದಾಗಿ ಭರವಸೆ ನೀಡಿದರು.
ಚರ್ಚೆಯ ಒಟ್ಟಾರೆ ಅಂಶಗಳ ಕ್ರೋಡೀಕರಿಸಿ ಮಾತನಾಡಿ ಪಿ.ಕೋದಂಡರಾಮಯ್ಯ, ರಾಜ್ಯ ಸರ್ಕಾರದ ಮಹತ್ವದ ಬಜೆಟ್ ಮುಂದಿನ ತಿಂಗಳು ಮಂಡನೆಯಾಗುತ್ತಿದೆ. ಭದ್ರಾ ಮೇಲ್ದಂಡೆಗೆ ತೊಡಕಾಗಿರುವ ಸಂಗತಿಗಳ ಬಗ್ಗೆ ಸಿಎಂ ಬಳಿ ಚರ್ಚಿಸಿ ನಿವಾರಣೆ ಮಾಡುವಂತೆ ಕೋರಲಾಗುವುದು. ಈ ಸಂಬಂಧ ಇನ್ನೊಂದು ವಾರದಲ್ಲಿ ಹೋರಾಟ ಸಮಿತಿ ವತಿಯಿಂದ ಮುಖ್ಯಮಂತ್ರಿಗಳ ಭೇಟಿ ಮಾಡಲಾಗುವುದೆಂದು ಹೇಳಿದರು.
ಹೋರಾಟ ಸಮಿತಿ ಸಂಚಾಲಕರುಗಳಾದ ಕೆ.ಆರ್.ದಯಾನಂದ, ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಶಿವುಯಾದವ್, ರಮಾನಾಗರಾಜ್, ಕುರುಬರಹಳ್ಳಿ ಶಿವಣ್ಣ, ಹಿರಿಯೂರಿನ ಎಂ.ಡಿ.ರವಿ, ಭದ್ರಾ ೇಲ್ದಂಡೆಯ ಜಗಳೂರು ತಾಲೂಕು ಮುಖಂಡ ಜೆ.ಯಾದವರೆಡ್ಡಿ, ಹೋರಾಟ ಸಮಿತಿ ಮೊಳಕಾಲ್ಮುರು ತಾಲೂಕು ಅಧ್ಯಕ್ಷ ಮಾರನಾಯಕ, ಸಿ.ಜಿ.ಸತ್ಯಪ್ಪ, ಎಂ.ಡಿ.ಕುಮಾರ್ , ಡಿ,ಮಲ್ಲಿಕಾರ್ಜುನಪ್ಪ, ಎಂ.ಬಿ.ಜಯದೇಮೂರ್ತಿ, ಚಿತ್ರಲಿಂಗಪ್ಪ, ಗೋವಿಂದಪ್ಪ, ಸಿದ್ದಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.