ಮಂಗಳೂರು: ಹಿಜಾಬ್ ವಿವಾದ ರಾಜ್ಯದೆಲ್ಲೆಡೆ ಹರಡಿದೆ. ಈ ಪ್ರಕರಣ ಸಂಬಂಧ ಫೆಬ್ರವರಿ 16ರ ತನಕ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೆಲ್ಲಾ ವಿವಾದದ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಸರ್ಕಾರಿ ಶಾಲೆ ಒಳಗೆ ಮಕ್ಕಳು ನಮಾಜ್ ಮಾಡಿರುವ ವಿಡಿಯೋ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 6 ಮತ್ತು 7ನೇ ತರಗತಿ ಮಕ್ಕಳು ಕಳೆದ ಮೂರು ವಾರಗಳಿಂದಲೂ ಈ ಶಾಲೆಯಲ್ಲಿ ನಮಾಜ್ ಮಾಡ್ತಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಎಸ್ಡಿಎಂಸಿ ಅಧ್ಯಕ್ಷ ಪ್ರವೀಣ್ ಭಂಡಾರಿ ಈ ಬಗ್ಗೆ ಮಾತನಾಡಿದ್ದು, ಈ ಶಾಲೆಯಲ್ಲಿ ಈ ಮುಂಚೆ ಈ ರೀತಿಯ ಘಟನೆಗಳು ನಡೆಯುತ್ತಿರಲಿಲ್ಲ. ಕಳೆದ ಮೂರು ವಾರಗಳಿಂದಷ್ಟೇ ಇಂಥ ಘಟನೆಗಳು ಮರುಕಳಿಸುತ್ತಿವೆ. ಕಳೆದ ಸಭೆಯಲ್ಲಿ ಶಾಲೆಯಲ್ಲೆ ನಮಾಜ್ ಮಾಡಲು ಅವಕಾಶ ಕೇಳಿದ್ದರು. ಆದರೆ ಆಡಳಿತ ಮಂಡಳಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ಶಾಲೆಯಲ್ಲೇ ನಮಾಜ್ ಮಾಡಿರುವುದು ಯಾವುದೋ ಕುತಂತ್ರವಿರಬಹುದು ಎಂದಿದ್ದಾರೆ. ಇನ್ನು ಎಡಿಎಂಸಿ ಸದಸ್ಯರು ಈ ಸಂಬಂಧ ಶಿಕ್ಷಣ ಇಲಾಖೆಗೆ ಮೌಖಿಕ ದೂರು ನೀಡಿದ್ದಾರೆ.