ಮೀರತ್: ಸಾಮಾಜಿಕ ಜಾಲತಾಣ ಸಂಸ್ಥೆ ‘ಮೆಟಾ’ (Meta) ನೀಡಿದ ತುರ್ತು ಸಂದೇಶಕ್ಕೆ ಕೇವಲ ಎಂಟೇ ನಿಮಿಷಗಳಲ್ಲಿ ಸ್ಪಂದಿಸಿದ ಉತ್ತರ ಪ್ರದೇಶದ ಮೀರತ್ ಪೊಲೀಸರು, ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನೊಬ್ಬನನ್ನು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಇಲಾಖೆ ಹಾಗೂ ಫೇಸ್ಬುಕ್-ಇನ್ಸ್ಟಾಗ್ರಾಮ್ಗಳ ಮಾತೃ ಸಂಸ್ಥೆಯಾದ ‘ಮೆಟಾ’ ನಡುವಿನ ವಿಶೇಷ ಸಮನ್ವಯ ವ್ಯವಸ್ಥೆಯಡಿ ಈ ಜೀವ ಉಳಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಜಾಲತಾಣಗಳಲ್ಲಿ ಯಾರಾದರೂ ಆತ್ಮಹತ್ಯೆ ಅಥವಾ ಸ್ವಯಂ-ಹಾನಿಯ ಮುನ್ಸೂಚನೆ ನೀಡುವ ಪೋಸ್ಟ್ಗಳನ್ನು ಹಾಕಿದರೆ, ಮೆಟಾ ಸಂಸ್ಥೆಯು ತಕ್ಷಣವೇ ಪೊಲೀಸರಿಗೆ ಅಲರ್ಟ್ ರವಾನಿಸುತ್ತದೆ.
ಪೊಲೀಸ್ ಪ್ರಕಟಣೆಯ ಪ್ರಕಾರ, ಮೀರತ್ನ ಸರ್ಧಾನಾ ನಿವಾಸಿಯಾದ ಯುವಕನೊಬ್ಬ ಜೂನ್ 7 ರಂದು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದನು. ಅದರಲ್ಲಿ ಅವನು ಬಿಳಿ ಬಣ್ಣದ ದ್ರವವನ್ನು ಕುಡಿಯುತ್ತಿರುವುದು ಕಂಡುಬಂದಿದ್ದು, ಜೊತೆಗೆ ಈಗ ನೀನು ನಿನ್ನ ಜೀವನದಲ್ಲಿ ಸಂತೋಷವಾಗಿರು ಎಂಬ ಬರಹವನ್ನು ಹಾಕಿದ್ದನು.
ಸಂಜೆ 6.53 ರ ಸುಮಾರಿಗೆ ಯುವಕನ ಪೋಸ್ಟ್ ಗಮನಿಸಿದ ಮೆಟಾ ಸಂಸ್ಥೆ, ತಕ್ಷಣವೇ ಪೊಲೀಸ್ ಪ್ರಧಾನ ಕಚೇರಿಯ ಸೋಶಿಯಲ್ ಮೀಡಿಯಾ ಸೆಂಟರ್ ಗೆ ‘ಆತ್ಮಹತ್ಯೆ ಅಲರ್ಟ್’ ರವಾನಿಸಿತು.ಪೊಲೀಸ್ ಮಹಾನಿರ್ದೇಶಕರ (DGP) ಸೂಚನೆಯ ಮೇರೆಗೆ, ಲಭ್ಯವಿದ್ದ ಮೊಬೈಲ್ ಸಂಖ್ಯೆ ಮತ್ತು ಲೊಕೇಶನ್ ಆಧಾರದ ಮೇಲೆ ಮೀರತ್ ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು. ಮಾಹಿತಿ ಸಿಕ್ಕ ಕೇವಲ ಎಂಟು ನಿಮಿಷಗಳಲ್ಲಿ ಸರ್ಧಾನಾ ಪೊಲೀಸರು ಯುವಕನ ಮನೆಗೆ ಧಾವಿಸಿದರು.
ಆ ಸಮಯದಲ್ಲಿ ಯುವಕನ ಸ್ಥಿತಿ ಗಂಭೀರವಾಗಿತ್ತು ಹಾಗೂ ಆತನ ಬಳಿ ಶಂಕಿತ ದ್ರವವಿದ್ದ ಬಾಟಲಿ ಪತ್ತೆಯಾಗಿತ್ತು. ಪೊಲೀಸರು ತಕ್ಷಣವೇ ಕುಟುಂಬಸ್ಥರ ನೆರವಿನೊಂದಿಗೆ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಯುವಕ ಈಗ ಅಪಾಯದಿಂದ ಪಾರಾಗಿದ್ದಾನೆ.
ಆತ್ಮಹತ್ಯೆ ಯತ್ನಕ್ಕೆ ಕಾರಣವೇನು?
ಪೊಲೀಸರ ವಿಚಾರಣೆಯ ವೇಳೆ, ಯುವಕನು ಪ್ರೇಮ ವೈಫಲ್ಯದಿಂದಾಗಿ ತೀವ್ರ ಮಾನಸಿಕ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಯುವಕ ಹಾಗೂ ಆತನ ಕುಟುಂಬದವರಿಗೆ ಪೊಲೀಸರು ಸೂಕ್ತ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಮತ್ತು ಮೆಟಾ ಸಂಸ್ಥೆಯ ನಡುವಿನ ಈ ಸಮನ್ವಯ ವ್ಯವಸ್ಥೆಯು 2022 ರಿಂದ ಕಾರ್ಯನಿರ್ವಹಿಸುತ್ತಿದೆ. ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಯಾರಾದರೂ ಆತ್ಮಹತ್ಯೆಗೆ ಪ್ರಚೋದಿಸುವ ಪೋಸ್ಟ್ ಹಾಕಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ.
ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ, ಜನವರಿ 1, 2023 ರಿಂದ ಮೇ 31, 2026 ರವರೆಗೆ ಈ ತಂತ್ರಜ್ಞಾನದ ಅಲರ್ಟ್ ಬಳಸಿ ಉತ್ತರ ಪ್ರದೇಶದಾದ್ಯಂತ ಒಟ್ಟು 3,011 ಜನರ ಪ್ರಾಣವನ್ನು ಸಕಾಲದಲ್ಲಿ ರಕ್ಷಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















