ತುಮಕೂರು: ತಮಗೆ ಮೂರು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿದ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅತ್ಯಂತ ಭಾವುಕರಾಗಿ ತಮ್ಮ ಮನದ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ್ದ ವೇಳೆ ಅವರು ತಮ್ಮ ರಾಜಕೀಯ ಹಾದಿಯನ್ನು ನೆನೆದು ಮಾತನಾಡಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ನಾನು ಗೆದ್ದಿದ್ದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅದು ನನ್ನ ಅದೃಷ್ಟವೋ ಅಥವಾ ಹಣೆಬರಹವೋ ಗೊತ್ತಿಲ್ಲ, ನಾನು ಸೋತ ಕಾರಣಕ್ಕಾಗಿ ಅವರು ಮುಖ್ಯಮಂತ್ರಿಯಾದರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
2018ರಲ್ಲಿ ನಮ್ಮ ಪಕ್ಷ 80 ಸ್ಥಾನಗಳನ್ನು ಗೆದ್ದಿತ್ತು. ಕೇವಲ 30ರಷ್ಟು ಸ್ಥಾನ ಗೆದ್ದಿದ್ದ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಾಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಅವತ್ತು ನನ್ನನ್ನು ಸಿಎಂ ಮಾಡಬಹುದಿತ್ತು. ಆದರೆ ಯಾವುದೋ ಕಾರಣಕ್ಕಾಗಿ ಆ ಎರಡನೇ ಅವಕಾಶವೂ ಕೈತಪ್ಪಿತು ಎಂದರು.
ಈ ಬಾರಿಯೂ ತಮಗೆ ಮುಖ್ಯಮಂತ್ರಿಯಾಗುವ ವಿಶ್ವಾಸವಿತ್ತು ಎಂದ ಪರಮೇಶ್ವರ್, ರಾಜಕಾರಣದಲ್ಲಿ ತೀರ್ಮಾನಗಳು ಬೇರೆ ತರಹವೇ ಇರುತ್ತವೆ. ಈ ಬಾರಿಯೂ ಯಾವುದೋ ರಾಜಕೀಯ ಕಾರಣಗಳಿಂದ ಸಿಎಂ ಸ್ಥಾನ ಸಿಗಲಿಲ್ಲ, ಕಡೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದಾರೆ ಎಂದು ಹೇಳಿದರು.
ತಮಗೆ ನೀಡಿರುವ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಅತೃಪ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು,ಇದು ಅತ್ಯಂತ ಜವಾಬ್ದಾರಿಯುತ ಸ್ಥಾನವಾಗಿದೆ. ರಾಜ್ಯದ ಜನ ನಮ್ಮನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ನಾವು ಅತ್ಯಂತ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನನ್ನ ಜವಾಬ್ದಾರಿಯನ್ನು ನಾನು ಖಂಡಿತವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಅವರು ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಯಾರನ್ನೂ ನೇರವಾಗಿ ಹೊಣೆಯಾಗಿಸದೆ, ಎಲ್ಲವನ್ನೂ ತಮ್ಮ ಹಣೆಬರಹ ಅಥವಾ ಅದೃಷ್ಟಕ್ಕೆ ಬಿಟ್ಟು ಭಾವುಕರಾಗಿ ನುಡಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















