ಸುದ್ದಿಒನ್, ಚಿತ್ರದುರ್ಗ,ಮೇ.27: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ‘ಗದ್ದೆಕಲ್ಲು’ ಎಂಬ ಜಾಗದಲ್ಲಿ ಇತಿಹಾಸ ಮಹತ್ವವಿರುವ ಅತ್ಯಂತ ಅಪರೂಪದ ನೊಳಂಬ ರಾಜ ದಂಪತಿಗಳ ಉಬ್ಬು ಕೆತ್ತನೆಯ ಶಿಲ್ಪವೊಂದು ಪತ್ತೆಯಾಗಿದೆ. ಇತಿಹಾಸ ಸಂಶೋಧಕರಾದ ಡಾ. ಮಹೇಶ್ ಕುಂಚಿಗನಾಳು ಹಾಗೂ ವೈದ್ಯರಾದ ಡಾ. ಸಂತೋಷ್ ಅವರು ನಡೆಸಿದ ಜಂಟಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಈ ಮಹತ್ವದ ಶೋಧ ನಡೆದಿದೆ.
ಖಾಸಗಿ ವಿದ್ಯಾಸಂಸ್ಥೆಯೊಂದರ ಒಡೆತನಕ್ಕೆ ಸೇರಿದ ಜಮೀನಿನಲ್ಲಿ ತಡೆಗೋಡೆ ನಿರ್ಮಿಸಲು ಭೂಮಿ ಅಗಿಯುತ್ತಿದ್ದಾಗ ಈ ಅಪರೂಪದ ಶಿಲ್ಪವು ಹೊರಬಂದಿದೆ. ಕಪ್ಪು ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿರುವ ಈ ವಿಗ್ರಹವು ಮೂರು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವನ್ನು ಹೊಂದಿದೆ.
ಶಿಲ್ಪದಲ್ಲಿ ರಾಜ ದಂಪತಿಗಳು ಕೈಮುಗಿದು ಅಂಜಲಿ ಮುದ್ರೆಯಲ್ಲಿ ನಿಂತಿರುವುದನ್ನು ಕಂಡರಿಸಲಾಗಿದೆ. ಅತ್ಯಂತ ಸರಳ ಮತ್ತು ಆಕರ್ಷಕವಾಗಿರುವ ಈ ಕೆತ್ತನೆಯಲ್ಲಿ ಪುರುಷನ ವಿನ್ಯಾಸ ಸೊಂಟದಿಂದ ಮೊಣಕಾಲಿನವರೆಗೆ ಧೋತಿಯಂತಹ ವಸ್ತ್ರವನ್ನು ಧರಿಸಿದ್ದು, ಸೊಂಟದ ಭಾಗದಲ್ಲಿ ವಸ್ತ್ರವನ್ನು ಬಿಗಿದು ಕಟ್ಟಿರುವ ಕಟಿಬಂಧವಿದೆ ಹಾಗೂ ಮೊಣಕೈ ಮೇಲಕ್ಕೆ ತಳ್ಳಲ್ಪಟ್ಟಿದೆ.
ಮಹಿಳೆಯ ವಿನ್ಯಾಸ ಸೊಂಟದ ಕೆಳಭಾಗದಲ್ಲಿ ಸೀರೆಯನ್ನು ಧರಿಸಿದ್ದು, ಕರ್ಣಕುಂಡಲ, ಕಂಠಹಾರ ಹಾಗೂ ತೋಳಬಂಧಿ ಆಭರಣಗಳನ್ನು ತೊಟ್ಟಿದ್ದಾಳೆ. ಜೊತೆಗೆ ನೊಳಂಬ ಶೈಲಿಯ ಸ್ತ್ರೀಯರ ಪ್ರಮುಖ ಕೇಶ ವಿನ್ಯಾಸವಾದ ವಿಶಿಷ್ಟ ‘ತುರುಬು’ ಕಟ್ಟಿಕೊಂಡಿದ್ದಾಳೆ. ನೊಳಂಬರ ರಾಜಲಾಂಛನ ನಂದಿ ಆಗಿದ್ದು, ಈ ಶಿಲ್ಪದ ಮೇಲ್ಭಾಗದಲ್ಲಿ ನಂದಿಯ ಉಬ್ಬುಕೆತ್ತನೆ ಇದೆ. ಹೀಗಾಗಿ ಇದು ನೊಳಂಬ ರಾಜದಂಪತಿಗಳದ್ದೇ ಶಿಲ್ಪ ಎಂದು ಸ್ಪಷ್ಟವಾಗಿ ಗುರುತಿಸಬಹುದಾಗಿದೆ ಎಂದು ಡಾ. ಮಹೇಶ್ ಕುಂಚಿಗನಾಳು ತಿಳಿಸಿದ್ದಾರೆ.
ಶಿಲ್ಪದ ವಿನ್ಯಾಸ, ಶೈಲಿ, ಕಲ್ಲಿನ ಬಳಕೆ ಹಾಗೂ ನಂದಿಯ ಕೆತ್ತನೆಗಳನ್ನು ಗಮನಿಸಿದರೆ ಇದು ನೊಳಂಬ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿದೆ. ಈ ದಂಪತಿಗಳು ಬಹುಶಃ ಇಲ್ಲಿನ ದೇವಾಲಯದ ನಿರ್ಮಾತೃಗಳಾಗಿರಬಹುದು ಮತ್ತು ಈ ಶಿಲ್ಪವು ಸುಮಾರು 10ನೇ ಶತಮಾನಕ್ಕೆ ಸೇರಿದ್ದಾಗಿರಬಹುದು ಎಂದು ಡಾ. ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸದ ಪುಟಗಳ ಪ್ರಕಾರ ಚಿತ್ರದುರ್ಗದ ಐಮಂಗಲ ಭಾಗವು ನೊಳಂಬ ಪಲ್ಲವರ ಆಡಳಿತಕ್ಕೆ ಒಳಪಟ್ಟಿತ್ತು. ನೊಳಂಬರ ಹೆಸರಿಗೆ ಅತಿ ಸಾಮೀಪ್ಯವಿರುವ ‘ನೊಳಂಬಹಟ್ಟಿ’ ಗ್ರಾಮವೂ ಪ್ರಸ್ತುತ ಸ್ಥಳಕ್ಕೆ ತೀರ ಹತ್ತಿರದಲ್ಲಿದೆ. ಈ ಹಿಂದೆ 1903 ರಲ್ಲಿ ಪ್ರಖ್ಯಾತ ಇತಿಹಾಸಕಾರ ಬಿ.ಎಲ್. ರೈಸ್ ಅವರು ಈ ಭಾಗದಲ್ಲಿ ನೊಳಂಬ ದಿಲೀಪನ ಮಗ ‘ನನ್ನಿ ನೊಳಂಬ’ ಬ್ರಾಹ್ಮಣರಿಗೆ ದಾನ ನೀಡಿದ ವಿಷಯವನ್ನು ಒಳಗೊಂಡ ಶಾಸನವನ್ನು ಪ್ರಕಟಿಸಿದ್ದರು. ಈಗ ಪತ್ತೆಯಾಗಿರುವ ದಂಪತಿಗಳ ಶಿಲ್ಪವೂ ಇದೇ ಸಾಲಿಗೆ ಸೇರುತ್ತದೆ.
ಕಳೆದ ವರ್ಷ ಇದೇ ಶಿಲ್ಪದ ಸಮೀಪವಿರುವ ವೆಂಕಟೇಶ್ ಎಂಬುವವರ ಹೊಲದಲ್ಲಿ ಬಸಿಕಾಲುವೆ ತೋಡುವಾಗ ಎರಡು ಬೃಹತ್ ನಂದಿ ವಿಗ್ರಹಗಳು, ಬ್ರಾಹ್ಮಿ ಹಾಗೂ ಮಾಹೇಶ್ವರಿಯ ಸಪ್ತಮಾತ್ರಿಕೆ ಶಿಲ್ಪಗಳು ಮತ್ತು ‘ಲಕುಲೀಶತಿಯ’ ಶಾಸನ ಪತ್ತೆಯಾಗಿದ್ದವು. ಇದರ ವಿವರಗಳನ್ನು ಡಾ. ಮಹೇಶ್ ಕುಂಚಿಗನಾಳು ಆಗಲೇ ಪ್ರಕಟಿಸಿದ್ದರು.
ಪ್ರಸ್ತುತ ಇಲ್ಲಿ ಬೃಹತ್ ನಂದಿ ವಿಗ್ರಹಗಳು ಹಾಗೂ ಸಪ್ತಮಾತೃಕೆಯರ ಶಿಲ್ಪಗಳು ದೊರೆತಿರುವುದರಿಂದ ಇದು ಹಿಂದೆ ದೊಡ್ಡ ಶಿವನ ದೇವಾಲಯವಾಗಿರಬಹುದು ಎನ್ನಲಾಗಿದೆ. ವೆಂಕಟೇಶ್ ಅವರ ಹೊಲಕ್ಕೆ ಹೊಂದಿಕೊಂಡಂತಿರುವ ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆಯು ಸೂಕ್ತ ಉತ್ಖನನ ನಡೆಸಿದರೆ, ಒಂದು ದೊಡ್ಡದಾದ ಶೈವ ದೇವಾಲಯದ ಸಂಕೀರ್ಣವೇ ಅನಾವರಣಗೊಳ್ಳಲಿದೆ ಎಂದು ಸಂಶೋಧಕರಾದ ಡಾ. ಮಹೇಶ್ ಕುಂಚಿಗನಾಳು ಮತ್ತು ಡಾ. ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















