ಚಿತ್ರದುರ್ಗ. ಮೇ.22: ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿರುವ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ವಿಳಂಬ ಮಾಡುತ್ತಿರುವ ಹಾಗೂ ನೋಟಿಸ್ ನೀಡಿದರೂ ಸ್ಪಂದಿಸದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಅಗತ್ಯವಿದ್ದಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಜೀವನ್ ಮಿನಷ್ (ಜೆಜೆಎಂ) ವಿವಿಧ ಬ್ಯಾಚ್‍ಗಳ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರಿನ ಯೋಜನೆ ನಾಲ್ಕೈದು ವರ್ಷಗಳು ಕಳೆದರೂ ಇನ್ನೂ ಅಂತಿಮ ಹಂತದಲ್ಲೇ ಉಳಿದಿರುವ ಕಾಮಗಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ಕೇವಲ ಟೆಂಡರ್ ನೀಡದಂತೆ ಶಿಫಾರಸು ಮಾಡುವುದಷ್ಟೇ ಅಲ್ಲದೆ, ಕಾನೂನಾತ್ಮಕವಾಗಿ ಕಪ್ಪುಪಟ್ಟಿಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‍ಗಳಿಗೆ ಡಾ. ಎಸ್. ಆಕಾಶ್ ನಿರ್ದೇಶನ ನೀಡಿದರು.
ಲೈನ್ ಲಿಸ್ಟ್ ಸಲ್ಲಿಸಲು ಗಡುವು: ಜೆಜೆಎಂ ಯೋಜನೆಯಡಿ ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರತಿಯೊಂದು ಕಾಮಗಾರಿಯ ಸಂಪೂರ್ಣ ವಿವರ ಒಳಗೊಂಡ ವರದಿಯನ್ನು ನೀಡಬೇಕು. ಒಟ್ಟು ಪ್ರಗತಿಯಲ್ಲಿರುವ 560 ಕಾಮಗಾರಿಗಳ ‘ಲೈನ್ ಲಿಸ್ಟ್’ ಸಿದ್ಧಪಡಿಸಿ, ಯಾವ ಕಾರಣಕ್ಕಾಗಿ ಕಾಮಗಾರಿ ವಿಳಂಬವಾಗಿದೆ ಮತ್ತು ಅದನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಸ್ಪಷ್ಟವಾದ ಷರಾ ಬರೆದು ತಕ್ಷಣವೇ ಸಲ್ಲಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‍ಗಳಿಗೆ ಜಿ.ಪಂ ಸಿಇಒ ತಾಕೀತು ಮಾಡಿದರು.

ನೈರ್ಮಲ್ಯ ನಿರ್ವಹಣೆಗೆ ಪಂಚಾಯಿತಿ ನಿಧಿ ಬಳಕೆ: ಕಸ ವಿಲೇವಾರಿ, ನೈರ್ಮಲ್ಯ ನಿರ್ವಹಣೆ ಹಾಗೂ ಅವುಗಳ ಸುಸ್ಥಿರತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು ತಮ್ಮ ಒಟ್ಟು ತೆರಿಗೆ ಸಂಗ್ರಹದ (ನಿಧಿ-1) ನಿರ್ದಿಷ್ಟ ಶೇಕಡಾವಾರು ಹಣವನ್ನು ಕಡ್ಡಾಯವಾಗಿ ನೈರ್ಮಲ್ಯ ಚಟುವಟಿಕೆಗಳಿಗೆ ಬಳಸುವಂತೆ ಶೀಘ್ರದಲ್ಲೇ ಗರಿಷ್ಠ ಮಿತಿ ನಿಗದಿಪಡಿಸಲಾಗುವುದು ಎಂದು ಜಿ.ಪಂ. ಸಿಇಒ ಡಾ. ಎಸ್. ಆಕಾಶ್ ತಿಳಿಸಿದರು.
2020-21ನೇ ಸಾಲಿನಲ್ಲಿ ಕಸ ವಿಲೇವಾರಿ ಹೊಣೆಯನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ (ಜಿಪಿಎಲ್‍ಎಫ್) ವಹಿಸಲು ಸರ್ಕಾರ ಕೈಗೊಂಡಿದ್ದ ತೀರ್ಮಾನ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯ 189 ಗ್ರಾಮ ಪಂಚಾಯತಿಗಳಲ್ಲೂ ಜಿಪಿಎಲ್‍ಎಫ್ ಒಕ್ಕೂಟಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದರೂ, ಸದ್ಯಕ್ಕೆ ಒಂದೇ ಒಂದು ಒಕ್ಕೂಟವೂ ಕಸ ವಿಂಗಡಣೆ ಮತ್ತು ವಿಲೇವಾರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಬೇಸರ ವ್ಯಕ್ತಪಡಿಸಿದರು.
ಕೆಲವು ಜಿಲ್ಲೆಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಘನತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಿ ಮಾಡಲಾಗುತ್ತಿದೆ. ಅದೇ ಮಾದರಿಯನ್ನು ಚಿತ್ರದುರ್ಗ ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲೂ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ನಿಯಮಾವಳಿಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಿ, ಸಮರ್ಥ ಏಜೆನ್ಸಿಗಳಿಗೆ ಜವಾಬ್ದಾರಿ ನೀಡುವ ಮೂಲಕ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಕೆ.ಜಯಲಕ್ಷ್ಮೀ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾ ಅಧಿಕಾರಿ ಡಿ.ಎಸ್.ಸುಮಾ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















