ಸುದ್ದಿಒನ್, ಚಿತ್ರದುರ್ಗ, ಮೇ.23 : ದೇಹಕ್ಕೆ ಅಂಗವೈಕಲ್ಯ ಇರಬಹುದು, ಆದರೆ ಸಾಧಿಸುವ ಮನಸ್ಸಿಗೆ ಯಾವುದೇ ವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ಚಿತ್ರದುರ್ಗದ ಯುವಕ ಕಾರ್ತಿಕ್ ವೈ. ಅಕ್ಷರಶಃ ಸಾಬೀತುಪಡಿಸಿದ್ದಾರೆ. ಹುಟ್ಟಿನಿಂದಲೇ ಪೋಲಿಯೋ ಬಾಧೆಯಿದ್ದರೂ, ವಿಧಿಗೆ ಶರಣಾಗದೆ ಸ್ವಾವಲಂಬಿ ಜೀವನ ನಡೆಸುತ್ತಿರುವ ಇವರ ಕಥೆ ಇಂದು ಪ್ರತಿಯೊಬ್ಬ ಯುವಕನಿಗೂ ದೊಡ್ಡ ಪ್ರೇರಣೆಯಾಗಿದೆ.
ಕಷ್ಟದ ನಡುವೆಯೂ ಹೆತ್ತವರ ಪ್ರೀತಿ, ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ, ಚಿತ್ರದುರ್ಗದ ವಿದ್ಯಾನಗರದ ನಿವಾಸಿಯಾದ ಕಾರ್ತಿಕ್ ವೈ (1992 ರಲ್ಲಿ ಜನನ) ಅವರಿಗೆ ಹುಟ್ಟಿನಿಂದಲೇ ಪೋಲಿಯೋದಿಂದ ಬಳಲುತ್ತಿದ್ದಾನೆ. ಆದರೆ ಮಗನ ಪರಿಸ್ಥಿತಿಯನ್ನು ಕಂಡು ಹೆತ್ತವರು ಧೃತಿಗೆಡಲಿಲ್ಲ. ತಂದೆ ಯಲ್ಲಪ್ಪ ಮತ್ತು ತಾಯಿ ಇಂದ್ರಮ್ಮ ಅವರು ಸಣ್ಣದೊಂದು ಇಸ್ತ್ರಿ ಅಂಗಡಿ ನಡೆಸುತ್ತಾ, ತಾವೆಷ್ಟೇ ಕಷ್ಟಪಟ್ಟರೂ ಮಗನಿಗೆ ಪ್ರೀತಿಯಿಂದ ಸಾಕಿ ಸಲಹಿದರು. ತಂದೆ-ತಾಯಿ ಹಾಗೂ ತಮ್ಮ ಸಂದೀಪ್ ಅವರ ಮುತುವರ್ಜಿಯಿಂದಾಗಿ ಕಾರ್ತಿಕ್ ದ್ವಿತೀಯ ಪಿಯುಸಿ ವರೆಗೂ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರೀತಿ ಕೊಟ್ಟು ಕಷ್ಟಪಟ್ಟು ಸಾಕಿದ್ದು ನಮ್ಮಮ್ಮ, ಅಪ್ಪಾಜಿ ಮತ್ತು ತಮ್ಮ. ಅವರಿಗೆ ನಾನು ಸದಾ ಚಿರಋಣಿ ಎಂದು ಕಾರ್ತಿಕ್ ಭಾವುಕರಾಗಿ ನುಡಿಯುತ್ತಾರೆ.
ಸ್ವಾವಲಂಬನೆಯ ಹಾದಿ ಹಿಡಿದ ಹಠವಾದಿ:
ಶಿಕ್ಷಣ ಮುಗಿದ ನಂತರ ಮನೆಯವರಿಗೆ ಹೊರೆಯಾಗಬಾರದು, ತನ್ನ ಕಾಲಿನ ಮೇಲೆ ತಾನು ನಿಂತು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಕಾರ್ತಿಕ್, ಆರಂಭದಲ್ಲಿ ಸುಮಾರು 8 ವರ್ಷಗಳ ಕಾಲ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವ ಸ್ವಯಂ ಉದ್ಯೋಗ ಮಾಡಿದರು. ಅಲ್ಲಿಂದ ಮುನ್ನಡೆದ ಅವರಿಗೆ ಮತ್ತೊಂದು ಹೊಸ ದಾರಿ ತೋರಿಸಿದ್ದು ಜೊಮ್ಯಾಟೊ ಸಂಸ್ಥೆ.
ಬದುಕಿಗೆ ಶಕ್ತಿ ತುಂಬಿದ ಜೊಮ್ಯಾಟೊ; ಮ್ಯಾನೇಜರ್ ಶೋಧನ್ ಶೆಟ್ಟಿ ಯವರ ಕೃಪೆಯಿಂದ ಕಳೆದ 4 ವರ್ಷಗಳಿಂದ ಕಾರ್ತಿಕ್ ಜೊಮ್ಯಾಟೊ ಸಂಸ್ಥೆಯಲ್ಲಿ ಯಶಸ್ವಿಯಾಗಿ ರೈಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವಿಕಲಚೇತನರಿಗೆ ಕೆಲಸ ಕೊಡಲು ಹಲವು ಕಂಪನಿಗಳು ಹಿಂಜರಿಯುತ್ತವೆ. ಆದರೆ ಜೊಮ್ಯಾಟೊ ನನ್ನ ಬದುಕಿಗೆ ಒಂದು ಹೊಸ ಲೈಫ್ ಕೊಟ್ಟಿದೆ, ನನ್ನ ಸ್ಟ್ರೆಂತ್ ಆಗಿ ನಿಂತಿದೆ ಎನ್ನುತ್ತಾರೆ ಕಾರ್ತಿಕ್.
ವಿಶೇಷವಾಗಿ ಅಂಗವಿಕಲರಿಗೆ ಉದ್ಯೋಗ ನೀಡಿ ಪ್ರೋತ್ಸಾಹಿಸುವ ಜೊಮ್ಯಾಟೊ ಮ್ಯಾನೇಜರ್ ಶೋಧನ್ ಶೆಟ್ಟಿ ಅವರು ತಮಗೆ ಕೆಲಸ ನೀಡಿ, ವೃತ್ತಿ ಜೀವನದ ಆಗುಹೋಗುಗಳಲ್ಲಿ ತುಂಬಾ ಮುತುವರ್ಜಿಯಿಂದ ಸಹಾಯ ಮಾಡುತ್ತಿರುವುದನ್ನು ಕಾರ್ತಿಕ್ ನೆನೆಯುತ್ತಾರೆ. ನನಗೆ ಬದುಕು ಕೊಟ್ಟ ಶೋಧನ್ ಶೆಟ್ಟಿ ಅವರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುವ ಕಾರ್ತಿಕ್, ತಮಗೆ ಸದಾ ಬೆಂಬಲವಾಗಿ ನಿಲ್ಲುವ ಸಹೋದ್ಯೋಗಿಗಳಾದ ಅಭಿಜಿತ್, ಅರ್ಜುನ, ಗಿರೀಶ್ ಹಾಗೂ ಇಡೀ ಜೊಮ್ಯಾಟೊ ರೈಡರ್ಸ್ ಬಳಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇಡೀ ಟೀಮ್ ತನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಯುವಕರಿಗೆ ದೊಡ್ಡ ಮಾದರಿ:
ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಕಷ್ಟಗಳಿಗೇ ಧೃತಿಗೆಟ್ಟು ಕೂರುವ ಯುವಕರಿಗೆ ಕಾರ್ತಿಕ್ ಅವರ ಜೀವನ ಒಂದು ಅದ್ಭುತ ಪಾಠ. ಕಷ್ಟದ ಪರಿಸ್ಥಿತಿಯಲ್ಲೂ ಇಸ್ತ್ರಿ ಅಂಗಡಿ ನಡೆಸಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಹೆತ್ತವರಿಗೆ ಆಸರೆಯಾಗಿ, ಜೊಮ್ಯಾಟೊ ರೈಡರ್ ಆಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ತಿಕ್ ಅವರ ಸ್ವಾಭಿಮಾನದ ಬದುಕು ನಿಜಕ್ಕೂ ಎಲ್ಲರಿಗೂ ಹೆಮ್ಮೆ ತರುವಂತದ್ದು. ಮನಸ್ಸಿದ್ದರೆ ಮಾರ್ಗ ಎಂಬಂತೆ ಸಾಗುತ್ತಿರುವ ಈ ಚಿತ್ರದುರ್ಗದ ಯುವಕನಿಗೆ ನಮ್ಮದೂ ಒಂದು ಸಲ್ಯೂಟ್….!
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







