Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾವೇರಿಯಲ್ಲಿ ಕರುಳು ಹಿಂಡುವ ದುರಂತ: ಮುಳುಗುತ್ತಿದ್ದ ದಿವ್ಯಾಂಗ ಮಗನನ್ನ ಉಳಿಸಲು ಹೋಗಿ ತಂದೆಯೂ ಜಲಸಮಾಧಿ!

---Advertisement---

ಸುದ್ದಿಒನ್,ಹಾವೇರಿ,ಮೇ.22: ಜಿಲ್ಲೆಯ ಆಲದಕಟ್ಟೆ ಗ್ರಾಮದಲ್ಲಿ ತಂದೆ-ಮಗನ ಅಕಾಲಿಕ ಸಾವು ಇಡೀ ಜಿಲ್ಲೆಯನ್ನೇ ಕಣ್ಣೀರಿಡುವಂತೆ ಮಾಡಿದೆ. ಹೊಂಡಕ್ಕೆ ಬಿದ್ದ ತನ್ನ ದಿವ್ಯಾಂಗ ಮಗನನ್ನು ಪ್ರಾಣದ ಹಂಗು ತೊರೆದು ರಕ್ಷಿಸಲು ಹೋದ ತಂದೆ, ಕೊನೆಗೆ ಮಗನೊಂದಿಗೇ ನೀರಿನಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ.

ಗ್ರಾಮದ ನಿವಾಸಿ ಶಂಭುಲಿಂಗ ಹಂಸಬಾವಿ (40) ಹಾಗೂ ಅವರ 8 ವರ್ಷದ ಪುತ್ರ ಶರತ್ ಮೃತಪಟ್ಟ ದುರ್ದೈವಿಗಳು. ದಿನನಿತ್ಯದಂತೆ ತಂದೆ-ಮಗ ಇಬ್ಬರೂ ಹಳ್ಳಿಯಲ್ಲಿ ಬೆಳಗ್ಗಿನ ವಾಕಿಂಗ್ ಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ಗ್ರಾಮದ ಮಧ್ಯಭಾಗದಲ್ಲಿರುವ ಹೊಂಡದ ಸಮೀಪ ಶಂಭುಲಿಂಗ ಅವರು ತಮ್ಮ ವಿಶೇಷ ಚೇತನ ಮಗ ಶರತ್ ನ ಕೈ ಹಿಡಿದು ವಾಕಿಂಗ್ ಮಾಡುತ್ತಿದ್ದರು. ಆದರೆ, ಹೊಂಡದ ಸುತ್ತಲೂ ಹಸಿರು ಪಾಚಿ ಆವರಿಸಿಕೊಂಡಿದ್ದರಿಂದ ರಸ್ತೆ ಸಖತ್ ನುಣುಪಾಗಿತ್ತು. ದುರದೃಷ್ಟವಶಾತ್, ಬಾಲಕ ಶರತ್ನ ಕಾಲು ಜಾರಿ ಆತ ದಿಢೀರನೆ ಆಳವಾದ ಹೊಂಡದ ನೀರಿಗೆ ಬಿದ್ದಿದ್ದಾನೆ. ಮಗ ಕಣ್ಣೆದುರೇ ಮುಳುಗುತ್ತಿರುವುದನ್ನು ಕಂಡ ತಂದೆಗೆ ತಡೆಯಲಾಗಲಿಲ್ಲ. ಮಗನನ್ನು ಬದುಕಿಸಲೇಬೇಕೆಂಬ ಹಠದಿಂದ ಶಂಭುಲಿಂಗ ಅವರು ತಕ್ಷಣವೇ ನೀರಿಗೆ ಧುಮುಕಿದ್ದಾರೆ.

ಹೊಂಡದಲ್ಲಿ ಪಾಚಿ ಮತ್ತು ದಟ್ಟವಾದ ಕೆಸರು ತುಂಬಿಕೊಂಡಿತ್ತು. ಜೊತೆಗೆ ನೀರಿನ ಆಳದ ಅರಿವಿಲ್ಲದ ಕಾರಣ, ಶಂಭುಲಿಂಗ ಅವರಿಗೆ ಮಗನನ್ನು ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಮಗನ ಪ್ರಾಣ ಉಳಿಸಲು ನೀರಿನಲ್ಲಿ ತೀವ್ರ ಹೋರಾಟ ನಡೆಸಿದ ತಂದೆ, ಕೊನೆಗೆ ಮಗನ ಜೊತೆಯಲ್ಲೇ ಉಸಿರು ನಿಲ್ಲಿಸಿದ್ದಾರೆ. ಒಂದೇ ಕ್ಷಣದಲ್ಲಿ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಹಾವೇರಿ ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ತಂದೆ-ಮಗನ ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯಲಾಗಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Join WhatsApp

Join Now

Join Telegram

Join Now