ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ (ಫೆ.07) : ನಗರದ ಶ್ರೀ ಕಬೀರಾನಂದಾಶ್ರಮದ ವತಿಯಿಂದ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆಯುವ 92ನೇ ಶಿವನಾಮ ಸಪ್ತಾಹದ ಅಧ್ಯಕ್ಷರಾಗಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ (ಪೈಲ್ವಾನ್) ಆಯ್ಕೆಯಾಗಿದ್ದಾರೆ.
ಇಂದು ಆಶ್ರಮದ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಹಾಗೂ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಪ್ಪೇಸ್ವಾಮಿಯವರನ್ನು ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು, ತಿಪ್ಪೇಸ್ವಾಮಿಯವರು ಧರ್ಮಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ಆದರೆ ಧಾರ್ಮಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ, ಈ ಬಾರಿ ಶಿವನಾಮ ಸಪ್ತಾಹವೂ ಹೊಸತನದಲ್ಲಿ ಮಾಡಬೇಕಿದೆ. ಹಿಂದಿನ ಅಧ್ಯಕ್ಷರಾದ ವೆಂಕಟೇಶ್ ರವರು ಸಹಾ ಉತ್ತಮವಾದ ಸಹಕಾರವನ್ನು ನೀಡುವುದರ ಮೂಲಕ 91ನೇ ಶಿವನಾಮ ಸಪ್ತಾಹವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡುವುದರ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.
ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಎಂದಿನಂತೆ ಈ ವರ್ಷವೂ ಸಹಾ ಫೆ. 25 ರಿಂದ ಮಾ.1ರವರೆಗೆ ಶಿವರಾತ್ರಿ ಮಹೋತ್ಸವದ ಶಿವನಾಮ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ, ಸಹಾಯದ ಅಗತ್ಯ ಇದೆ. ಈಗ ಆಯ್ಕೆಯಾಗಿರುವ ತಿಪ್ಪೇಸ್ವಾಮಿಯವರು 92ನೇ ಶಿವನಾಮ ಸಪ್ತಾಹವನ್ನು ಸುಸೂತ್ರವಾಗಿ ನಡೆಸುವಂತಾಗಲೀ ಇದಕ್ಕೆ ನಮ್ಮೆಲ್ಲರ ಸಹಕಾರ ಇದೇ ಎಂದರು.
ಇದೇ ಸಂದರ್ಭದಲ್ಲಿ ಶಿವನಾಮ ಸಪ್ತಾಹಕ್ಕೆ ಅಗತ್ಯವಾದ ವಿವಿಧ ರೀತಿಯ ಸಮಿತಿಗಳನ್ನು ಸಹಾ ರಚನೆ ಮಾಡಿ ಅದಕ್ಕೆ ಅಗತ್ಯ ಇರುವ ಸದಸ್ಯರನ್ನು ನೇಮಕ ಮಾಡಲಾಯಿತು. ಈ ಬಾರಿ ಸಪ್ತಾಹದಲ್ಲಿ ಸಾಧ್ಯವಾದಷ್ಟು ಹೊಸಬರಿಗೆ ಅವಕಾಶವನ್ನು ನೀಡಲು ತೀರ್ಮಾನ ಮಾಡಲಾಯಿತು.
ಈ ಸಭೆಯಲ್ಲಿ ಸಮಿತಿಯ ಕಾರ್ಯದರ್ಶೀ ಪ್ರಶಾಂತ್, ಮುಖಂಡರಾದ ಸಂಪಿಗೆ ಸಿದ್ದೇಶ್, ನಾಗರಾಜ್ ಸಗಂ, ಸಿದ್ದೇಶ್ ಯಾದವ್, ನಗರಸಭಾ ಸದಸ್ಯರಾದ ವೆಂಕಟೇಶ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯ ಓಂಕಾಮರ್, ಸಮಾಜದ ಮುಖಂಡರಾದ ಜಿತೇಂದ್ರ, ರಮೇಶ್ ಕೋಟಿ ಭಾಗವಹಿಸಿದ್ದರು.