ಬೆಂಗಳೂರು : ಕಳೆದ ಮೇ 10ರಂದು ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆಯ ದಾಳಿಗೆ 10 ವರ್ಷದ ಬಾಲಕ ಬಲಿಯಾದ ಘಟನೆ ರಾಜ್ಯದಾದ್ಯಂತ ಆತಂಕ ಮೂಡಿಸಿದ ಬೆನ್ನಲ್ಲೇ, ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರು ಹಾಗೂ ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಸೂಕ್ಷ್ಮ ಅರಣ್ಯ ವಲಯಗಳಲ್ಲಿ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸಾರ್ವಜನಿಕರ ಜೀವ ರಕ್ಷಣೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಸಚಿವರ ನಿರ್ದೇಶನದ ಮೇರೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ತುರ್ತು ಸುತ್ತೋಲೆ ಹೊರಡಿಸಿದ್ದು, ಚಿರತೆ, ಹುಲಿ, ಆನೆ ಹಾಗೂ ಕರಡಿಗಳ ಸಂಚಾರವಿರುವ ಎಲ್ಲಾ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಚಾರಣ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಚಾರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ‘ಪ್ರಮಾಣಿತ ಕಾರ್ಯ ವಿಧಾನ’ (SOP) ಅಡಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೆ ತಂದ ಬಳಿಕವೇ ಟ್ರೆಕ್ಕಿಂಗ್‌ಗೆ ಅನುಮತಿ ನೀಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರತಿ ವಿಭಾಗದ ಅರಣ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸುರಕ್ಷತಾ ಸಿದ್ಧತೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.ಈ ಆದೇಶವು ಕೇವಲ ಚಾಮರಾಜನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಬಂಡಿಪುರ (Bandipur National Park,) ನಾಗರ ಹೊಳೆ(Nagarhole National Park,) BRT Tiger Reserve, ಭದ್ರಾ (Bhadra Wildlife Sanctuary) ಹಾಗೂ ಕಾಳಿ ಸಿಂಹ ಧಾಮ( Kali Tiger Reserve )ಸೇರಿದಂತೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಭಾಗದ ಪ್ರಮುಖ ಅರಣ್ಯ ಪ್ರದೇಶಗಳಿಗೂ ಅನ್ವಯವಾಗಲಿದೆ.
ಮುಂದಿನ ಆದೇಶದವರೆಗೆ ಯಾವುದೇ ಅಧಿಕೃತ ಅಥವಾ ಅನಧಿಕೃತ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಸಂಚಾರ ನಡೆಸುವುದು ಅಪರಾಧವೆಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘಿಸಿ ಕಾಡು ಪ್ರದೇಶಗಳಿಗೆ ಪ್ರವೇಶಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.ಕಾಡುಪ್ರಾಣಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










