ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ವೈದಿಕ ಜಡ ಸನಾತನ ವ್ಯವಸ್ಥೆಯ ವಿರುದ್ಧ ಬುದ್ದ, ಬಸವ ಇವರುಗಳು ಸಿಡಿದೆದ್ದು ಮಾನವೀಯ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತಿದ್ದರು ಎಂದು ನಿವೃತ್ತ ಪ್ರಾಚಾರ್ಯರಾದ ಡಾ. ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಹೇಳಿದರು.
ಸರ್ಕಾರಿ ಕಲಾ ಕಾಲೇಜು ಯಂಗಮ್ಮನಕಟ್ಟೆ ಹಿಂಭಾಗದಲ್ಲಿರುವ ವಿಪಶ್ಯನ ಧ್ಯಾನ ಕೇಂದ್ರದಲ್ಲಿ ಭಾನುವಾರ ಪ್ರೊ. ಹೆಚ್. ಲಿಂಗಪ್ಪನವರ ಅರಿವಿನಿ ಸಿರಿ ಚನ್ನಬಸವಣ್ಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಹುಟ್ಟಿದ ವಚನಚಳುವಳಿ ಪರಿಶುದ್ಧ ಕಾಯಕಕ್ಕೆ ಸಮಾನವಾದದ್ದು. ಸಾಮಾಜಿಕ, ಆರ್ಥಿಕ ದೃಷ್ಠಿಕೋನ ದಲಿತ ಮತ್ತು ಎಡಪಂಥೀಯ ಹೆಜ್ಜೆ ಸಮಸಮಾಜದ ಪರಿಕಲ್ಪನೆ ಅನುಷ್ಠಾನಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಚನ್ನಬಸವಣ್ಣನವರು ಶ್ರಮಿಸಿದ್ದಾರೆ. ವಚನಕಾರರ ಅನೇಕ ಕೃತಿಗಳು, ವಿಚಾರಧಾರೆ ಈ ಪುಸ್ತಕದಲ್ಲಿದೆ.
ಆತ್ಮಶುದ್ಧೀಕರಣ, ವ್ಯಕ್ತಿತ್ವ ವಿಕಾಸನಕ್ಕೆ ಮೂಲವಾಗುತ್ತದೆ. ಪ್ರಸ್ತುತ ವಿದ್ಯಾಮಾನಕ್ಕೆ ಮುಖಾಮುಖಿಯಾಗಿಸಿಕೊಳ್ಳುವುದು ಎಲ್ಲರ ಆದ್ಯಕರ್ತವ್ಯ ಹಾಗೂ ಮೂಲ ಆಶಯವಾಗಬೇಕು. ಅಂತರಂಗಶುದ್ಧಿ, ಬಹಿರಂಗ ಶುದ್ಧಿ ನಡೆನುಡಿ ಒಂದಾಗದಿದ್ದರೆ ಪುರೋಹಿತಶಾಹಿ, ವೈದಿಕಶಾಹಿತನದ ಅನೇಕ ಸಂಗತಿಗಳಿಗೆ ಮಾರುಹೋಗಬೇಕಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಚನ್ನಬಸವಣ್ಣನವರ ವಿಚಾರಗಳನ್ನು ಅರಿತು ಪರಿಪೂರ್ಣವಾಗದಿದ್ದರೆ ಮೌಢ್ಯದಿಂದ ಹೊರಬರಲು ಆಗುವುದಿಲ್ಲ ಎಂದು ಹೇಳಿದರು.
ವಿಪಶ್ಯನ ಧ್ಯಾನ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಹಿರಿಯೂರು ಅಂಬೇಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ ಪ್ರೊ. ಹೆಚ್. ಲಿಂಗಪ್ಪನವರು 32 ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಇಳಿಯ ವಯಸ್ಸಿನಲ್ಲೂ ಬಿಡುವಿಲ್ಲದೆ ಪುಸ್ತಕಗಳ ರಚನೆಯಲ್ಲಿ ತೊಡಗಿರುವ ಇವರು ಬುದ್ಧ, ಬಸವ, ಅಂಬೇಡ್ಕರ್, ಚನ್ನಬಸವಣ್ಣನವರ ವಿಚಾರಧಾರೆಗಳನ್ನು ತಮ್ಮ ಬರಹದ ಮೂಲಕ ಸಮಾಜಕ್ಕೆ ಸಮರ್ಪಿಸುತ್ತಿದ್ದಾರೆ ಎಂದು ಗುಣಗಾನ ಮಾಡಿದರು.
ಕೃತಿಕಾರ ಪ್ರೊ. ಹೆಚ್. ಲಿಂಗಪ್ಪ ಮಾತನಾಡಿ ವೈದಿಕ ವ್ಯವಸ್ಥೆಯ ವಿರುದ್ಧ ದಂಗೆ ಎದ್ದ ಬುದ್ಧ ಹಿಂಸೆ, ಬಲಿಕೊಡುವುದನ್ನು ತಡೆದರು. ಅಂತರಂಗ ಬಹಿರಂಗ ಎರಡನ್ನೂ ಶುದ್ಧೀಕರಣ ಮಾಡಿಕೊಂಡು ಬದುಕಿದ ಚನ್ನಬಸವಣ್ಣ ವೈದಿಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಹಾಗಾಗಿ ಅಂತಹ ಮಹಾನ್ ದಾರ್ಶನಿಕರ ವಿಚಾರಧಾರೆಗಳನ್ನು ಪಾಲಿಸುವುದರ ಮೂಲಕ ಅವಕಾಶಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕು, ಆಗ ಮಾತ್ರ ಬುದ್ಧ, ಬಸವ, ಅಂಬೇಡ್ಕರ್, ಅಲ್ಲಮ, ಚನ್ನಬಸವಣ್ಣ ಇವರುಗಳ ವಿಚಾರಧಾರೆಗಳು ಜೀವಂತವಾಗಿರಲು ಸಾಧ್ಯ ಎಂದರು.
ಪ್ರೊ. ಮುದ್ದಪ್ಪ, ನಿವೃತ್ತ ಪಿ.ಯು. ಡಿ.ಡಿ.ಪಿ.ಡಿ. ಬಿ.ಆರ್. ಶಿವಕುಮಾರ್, ನ್ಯಾಯವಾದಿ ಚಂದ್ರಣ್ಣ ಇವರುಗಳು ವೇದಿಕೆಯಲ್ಲಿದ್ದರು.