Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರಿಗೆ ನಾಳೆ ಪ್ರಧಾನಿ ಮೋದಿ ಆಗಮನ: ಆರ್ಟ್ ಆಫ್ ಲಿವಿಂಗ್ 45ನೇ ವಾರ್ಷಿಕೋತ್ಸವದಲ್ಲಿ ಭಾಗಿ

---Advertisement---

ಸುದ್ದಿಒನ್,ಬೆಂಗಳೂರು,ಮೇ.09: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ (ಮೇ 10) ಸಂಭ್ರಮದ ವಾತಾವರಣ ಮನೆಮಾಡಲಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

ನಾಳೆ ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರು ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ರಾಜ್ಯ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿರುವ ವಿಶೇಷ ಸನ್ಮಾನ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿ, ವಾರ್ಷಿಕೋತ್ಸವ ಮತ್ತು ಗುರೂಜಿಯವರ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಭೇಟಿಯ ಪ್ರಮುಖ ಆಕರ್ಷಣೆಯೆಂದರೆ, ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರದ ಲೋಕಾರ್ಪಣೆ. ಆಂತರಿಕ ಶಾಂತಿ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಮಂದಿರವನ್ನು ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿದ್ದು, ಪ್ರಧಾನಿ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ.

1981ರಲ್ಲಿ ಶ್ರೀ ಶ್ರೀ ರವಿಶಂಕರ್ ಅವರಿಂದ ಆರಂಭವಾದ ಈ ಸಂಸ್ಥೆ, ಇಂದು ವಿಶ್ವದ 182 ದೇಶಗಳಲ್ಲಿ ಹರಡಿಕೊಂಡಿದೆ. ಇದು ಜಾಗತಿಕ ಮಟ್ಟದ ಅತಿದೊಡ್ಡ ಸ್ವಯಂಸೇವಕ ಚಾಲಿತ ಮಾನವೀಯ ಮತ್ತು ಶೈಕ್ಷಣಿಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಎಚ್‌ಎಎಲ್ ವಿಮಾನ ನಿಲ್ದಾಣ ಹಾಗೂ ಕನಕಪುರ ರಸ್ತೆಯ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

Join WhatsApp

Join Now

Join Telegram

Join Now