ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಕಳೆದ ಹದಿನೈದು ವರ್ಷಗಳಿಂದಲೂ ವಿದ್ಯುತ್ ಸಂಪರ್ಕವನ್ನೆ ಕಾಣದ ಹಜರತ್ ಹೈದರ್‍ಷಾವಲಿ ದರ್ಗಾ ಕಾಂಪ್ಲೆಕ್ಸ್ ಗೆ ನೂರು ಕೆ.ವಿ. ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಕ್ಫ್‍ಬೋರ್ಡ್ ಮಂಡಳಿ ಸದಸ್ಯ ಅನ್ವರ್ ಭಾಷ ತಿಳಿಸಿದರು.
ನಗರದ ಗಾಂಧಿವೃತ್ತ ಸಮೀಪ ದಾವಣಗೆರೆ ರಸ್ತೆಯಲ್ಲಿರುವ ಹಜರತ್ ಹೈದರ್‍ಷಾವಲಿ ದರ್ಗಾ ಕಾಂಪ್ಲೆಕ್ಸ್ ಗೆ ಅಳವಡಿಸಲಾಗಿರುವ ನೂರು ಕೆ.ವಿ.ವಿದ್ಯುತ್ ಟ್ರಾನ್ಸ್‌ಫಾರ್ಮರ್ ವಿದ್ಯುತ್ ಸಂಪರ್ಕಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ಈ ಕಾಂಪ್ಲೆಕ್ಸ್‍ನಲ್ಲಿರುವ ಮಳಿಗೆಗಳಿಗೆ ಇದುವರೆವಿಗೂ ವಿದ್ಯುತ್ ಇಲ್ಲದ ಕಾರಣ ಬಾಡಿಗೆದಾರರು ಪ್ರತಿ ತಿಂಗಳು ಬಾಡಿಗೆ ಹಣ ಪಾವತಿಸಲು ತಕರಾರು ಮಾಡುತ್ತಿದ್ದರು.
ಇದರಿಂದ ಅವರುಗಳಿಗೆ ತೊಂದರೆಯಾಗಬಾರದೆಂದು ಕಾರ್ಯಕಾರಿ ಸಮಿತಿಯವರು ಬೆಸ್ಕಾಂಗೆ ಸಂಪರ್ಕಿಸಿ ನೂರು ಕೆ.ವಿ.ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದೆ. ಇದರ ಮೂಲಕ ಕಾಂಪ್ಲೆಕ್ಸ್‍ನ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ಬೆಸ್ಕಾಂನವರ ಸಹಕಾರವೂ ದೊರಕಿತು ಎಂದು ಸ್ಮರಿಸಿಕೊಂಡರು.
ಹಜರತ್ ಹೈದರ್‍ಷಾವಲಿ ದರ್ಗಾ ಕಾಂಪ್ಲೆಕ್ಸ್ ಕಮಿಟಿ ಅಧ್ಯಕ್ಷ ಎಂ.ಹನೀಫ್ ಮಾತನಾಡಿ ಪ್ರತಿ ತಿಂಗಳು ಬಾಡಿಗೆ ಹಣ ಪಾವತಿಸುವಂತೆ ಮಳಿಗೆಯಲ್ಲಿರುವವರನ್ನು ಕೇಳಿದಾಗ ಕರೆಂಟ್ ಇಲ್ಲ ಎನ್ನುವ ತಗಾದೆ ತೆಗೆದು ಬಾಡಿಗೆ ನೀಡಲು ಸತಾಯಿಸುತ್ತಿದ್ದರು. ಕಮಿಟಿ ಸದಸ್ಯರು ಹಾಗೂ ವಕ್ಫ್‍ಬೋರ್ಡ್ ಸಹಕಾರದಿಂದ ವಿದ್ಯುತ್ ಸಂಪರ್ಕ ದೊರಕಿದೆ. ಇನ್ನು ಮುಂದೆ ಕಾಂಪ್ಲೆಕ್ಸ್ ನ ಮಳಿಗೆಗಳಲ್ಲಿರುವ ಬಾಡಿಗೆದಾರರು ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಹಣ ಪಾವತಿಸಿ ಅಭಿವೃದ್ದಿಗೆ ಕೈಜೋಡಿಸುವಂತೆ ಮನವಿ ಮಾಡಿ ದರ್ಗಾ ಇರುವ ಕಡೆ ಮಸೀದಿ ನಿರ್ಮಿಸುವ ಆಲೋಚನೆಯೂ ಇದೆ. ಇದಕ್ಕೆ ವೈಯಕ್ತಿಕವಾಗಿ ಎರಡು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ಹಜರತ್ ಹೈದರ್‍ಷಾವಲಿ ದರ್ಗಾ ಕಾಂಪ್ಲೆಕ್ಸ್ ಕಮಿಟಿ ಕಾರ್ಯದರ್ಶಿ ಸೈಯದ್ ನಯಾಜ್, ಜಾಮಿಯಾ ಮಸೀದಿ ಮುತುವಲ್ಲಿ ಬಷೀರ್‍ಸಾಬ್, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್‍ಪಾಷ, ನ್ಯಾಯವಾದಿಗಳಾದ ಮಹಮದ್ ಸಾಧಿಕ್‍ವುಲ್ಲಾ, ಬಿ.ಕೆ.ರಹಮತ್‍ವುಲ್ಲಾ, ನಗರಸಭೆ ಸದಸ್ಯ ನಸ್ರುಲ್ಲಾ, ಸಯೀದು, ಶಕೀಲಭಾನು, ಸೈಯದ್ ಸೈಫುಲ್ಲಾ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಬಿ.ಡಿ.ಸಿ.ಸದಸ್ಯ ಎಂ.ಡಿ.ಅಪ್ಸರ್‍ಕರೀಂ, ಸುಬಾನುಲ್ಲಾ, ವಿದ್ಯುತ್ ಗುತ್ತಿಗೆದಾರ ಮುಹಿಬುಲ್ಲಾ, ಅಬ್ದುಲ್‍ಗಫೂರ್, ಯಾಯ, ಸೈಯದ್ ಹನೀಫ್, ನಸೀಂ, ಮಹಮದ್ ಇರ್ಫಾನ್ ಸೇರಿದಂತೆ ಹಜರತ್ ಹೈದರ್‍ಷಾವಲಿ ದರ್ಗಾ ಕಮಿಟಿಯ ಸದಸ್ಯರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.