ಉಡುಪಿ: ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇಂದು ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟಿನಲ್ಲೇ ತಡೆದ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.
ಹಿಜಾಬ್ ತೆಗೆದು ಒಳಗೆ ಬನ್ನಿ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಅದಕ್ಕೆ ವಿದ್ಯಾರ್ಥಿನಿಯರು ನಿರಾಕರಿಸಿದ್ದಾರೆ. ಹಾಗಾದ್ರೆ ಗೇಟಿನಲ್ಲೇ ನಿಂತುಕೊಳ್ಳಿ ಎಂದಾಗ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ. ಮುಂಚೆಯಿಂದಲೂ ನಾವೂ ಹಿಜಾಬ್ ಧರಿಸಿಯೇ ಕಾಲೇಜಿಗೆ ಹಾಜರಾಗುತ್ತಿದ್ದೇವೆ. ಬೇಕಾದರೇ ಅವರು ಶಲ್ಯ ಧರಿಸಿಯೇ ಬರಲಿ. ಕುಂದಾಪುರದ ಕಾಲೇಜಿನ ಉಲ್ಲೇಖವಿದ್ದರೆ ತೋರಿಸಲಿ ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ಇನ್ನು ವಿದ್ಯಾರ್ಥಿನಿಯರ ಮಾತಿಗೆ ಕಾಲೇಜು ಮಂಡಳಿ ಉತ್ತರಿಸಿದ್ದು, ಸರ್ಕಾರ ಆದೇಶ ಹೊರಡಿಸಿದೆ. ಹಾಗಂತ ಎಲ್ಲಾ ಕಡೆಗೂ ನೋಟೀಸ್ ಕೊಡೋದಕ್ಕೆ ಆಗಲ್ಲ. ಸರ್ಕಾರದ ಆದೇಶವನ್ನ ನಾವೂ ಪಾಲನೆ ಮಾಡ್ತಾ ಇದ್ದೀವಿ ಎಂದಿದ್ದಾರೆ.
ಇದೇ ವೇಳೆ ಈ ಗೊಂದಲದ ವಿಚಾರಕ್ಕೆ ಉತ್ತರ ನೀಡಿರುವ ಉಡುಪಿ ಉಸ್ತುವಾರಿ ಸಚಿವ ಎಸ್ ಅಂಗಾರ, ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ಮಾಡುವುದು ಅಸಾಧ್ಯವಾಗಿದೆ. ಈ ಸಂಬಂಧ ಜಿಲ್ಲಾಡಳಿತ ಜೊತೆ ಚರ್ಚಿಸಿ, ಸರ್ಕಾರವೇ ಒಂದು ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ.