ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಶ್ರೀರಂಗಪಟ್ಟಣವನ್ನು ತನ್ನ ರಾಜ್ಯಧಾನಿಯಾಗಿ ಆಳ್ವಿಕೆ ಮಾಡುತ್ತಿದ್ದ ಟಿಪ್ಪು ಸುಲ್ತಾನನು ಬೆಂಗಳೂರಿನಲ್ಲಿ ಕೂಡ ತನ್ನ ಒಂದು ಬೇಸಿಗೆ ಕಾಲಕ್ಕೆ ಅನುಕೂಲವಾಗುವಂತೆ ಬೇಸಿಗೆ ಅರಮನೆಯನ್ನು ನಿರ್ಮಿಸಿದ್ದು ಇದೊಂದು ಅತ್ಯುತ್ತಮ ಪ್ರವಾಸಿ ಸ್ಥಳವಾಗಿದೆ. ಬೆಂಗಳೂರಿನ ನೆಚ್ಚಿನ ಹವಾಮಾನಕ್ಕೆ ಮನಸೋತು ತನಗೆ ಅನುಕೂಲವಾಗುವಂತೆ ಬೇಸಿಗೆಯಲ್ಲಿ ಕೆಲವು ವಾರಗಳ ತನಕ ಟಿಪ್ಪು ಸುಲ್ತಾನನು ಈ ಅರಮನೆಯಲ್ಲಿ ತಂಗಿ ಇಲ್ಲಿಂದಲೇ ತನ್ನ ರಾಜ್ಯ ಕಾರ್ಯಗಳನ್ನು ನಡೆಸುತ್ತಿದ್ದನು.

ಇಂತಹ ಬೇಸಿಗೆ ಅರಮನೆಯು ಇಂದಿಗೂ ಸುಸ್ಥಿತಿಯಲ್ಲಿದ್ದು ಅಂದಿನ ನಿರ್ಮಾಣಕಾರರ ತಂತ್ರಜ್ಞಾನವನ್ನು ಹಾಗೂ ಕಲಾ ನೈಪುಣ್ಯತೆಯನ್ನು ಇಂದಿಗೂ ಹಾಳಾಗದೆ ಉಳಿದುಕೊಂಡಿರುವುದನ್ನು ಗಮನಿಸಬಹುದು.
ಬೆಂಗಳೂರಿನ ನೋಡಲೇಬೇಕಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರು ಹಾಗೂ ವಿದೇಶಿಗರು ಈ ಬೇಸಿಗೆ ಅರಮನೆಯ ಕಲಾ ನೈಪುಣ್ಯತೆ ಹಾಗೂ ಇಲ್ಲಿನ ದೃಶ್ಯ ವೈಭವ ಕಂಡು ಬೆರಗಾಗುತ್ತಾರೆ.
ಬೆಂಗಳೂರಿನ ಕೋಟೆಯ ಆವರಣದಲ್ಲಿ 1781 ರಲ್ಲಿ ಹೈದರಾಲಿ ಖಾನ್ ಕಾಲದಲ್ಲಿ ಮರ ಹಾಗೂ ಗಾರೆಗಚ್ಚಿನ ಈ ಅರಮನೆಯ ನಿರ್ಮಾಣ ಪ್ರಾರಂಭಗೊಂಡು ತದನಂತರ 1791 ರಲ್ಲಿ ಟಿಪ್ಪು ಸುಲ್ತಾನರ ಕಾಲದಲ್ಲಿ ಪೂರ್ಣಗೊಂಡಿತು. ಇದು ಬೆಂಗಳೂರು ಕೋಟೆಯ ಒಳ ಆವರಣದ ಶ್ರೀ ವೆಂಕಟರಮಣ ದೇವಾಲಯದ ಹತ್ತಿರದಲ್ಲಿದೆ.ನೋಡಲು ಒಂದು ಅಂತಸ್ತಿನ ಸ್ತಂಭಗಳ ಮಂಟಪದಂತೆ ಕಂಡರೂ ನೈಜ ಸ್ಥಿತಿಯಲ್ಲಿ ಎರಡು ಅಂತಸ್ತಿನ ಈ ಕಟ್ಟಡವನ್ನು ಸಮಕಾಲೀನ ಇಂಡೋ -ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಆಯತಾಕಾರದ ಕಲ್ಲಿನ ಅಧಿಷ್ಠಾನದ ಮೇಲೆ ನಿರ್ಮಿಸಲ್ಪಟ್ಟ ಈ ಕಟ್ಟಡದ ಮುಂಭಾಗದಲ್ಲಿ ಉನ್ನತವಾದ ಮರದ ಸ್ತಂಭಗಳನ್ನು ಕಲ್ಲಿನ ಪೀಠದ ಮೇಲೆ ಅಳವಡಿಸಲಾಗಿದ್ದು ಬಹು ಭಾರವಾದ ತೊಲೆಗಳನ್ನು ಆಧರಿಸಿ ನಿಲ್ಲಿಸಲಾಗಿದೆ.
ಕಂಬಗಳ ನಡುವೆ ಇಂಡೋ- ಇಸ್ಲಾಮಿಕ್ ಶೈಲಿಯ ಅರ್ಧ ವರ್ತುಲ ಗಳ ಕಮಾನುಗಳನ್ನು ಹಾಗೂ ಬೋದಿಗೆಗಳನ್ನು ಅಳವಡಿಸಲಾಗಿದ್ದು ಇಡೀ ಸ್ತಂಭಗಳ ಮೊಗಸಾಲೆಯನ್ನು ಕಂದು ಮತ್ತು ಹಳದಿ ಬಣ್ಣದ ಲೇಪನದಿಂದ ಸುಂದರಗೊಳಿಸಲಾಗಿದೆ. ಅರಮನೆಯ ಗೋಡೆಗಳು ಮತ್ತು ಛತ್ತುಗಳನ್ನು ಪತ್ರ ಲತೆ ಹಾಗೂ ಬಣ್ಣದ ಚಿತ್ರಗಳಿಂದ ಅಲಂಕರಿಸಲಾಗಿದ್ದು ನೋಡಲು ನಯನ ಮನೋಹರವಾಗಿದೆ.
ಮೇಲಂತಸ್ತಿನ ಕೋಣೆಗಳಿಗೆ ಹಾಗೂ ಮಧ್ಯದಲ್ಲಿ ಮುಂಚಾಚಿದ ಕಟಾಂಜನ ಮಂಟಪಗಳಿಗೆ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಮೆಟ್ಟಿಲುಗಳಿವೆ.
ಈ ಕೋಣೆಗಳನ್ನು ಅಂತಃಪುರ ವೆಂದು ಗುರುತಿಸಬಹುದು. ಕಟ್ಟಡದ ಮಧ್ಯಭಾಗದಲ್ಲಿ ಒಂದು ವಿಶಾಲವಾದ ಆಯತಾಕಾರದ ಹಜಾರವಿದ್ದು ಅದರ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಕೆಳ ಅಂತಸ್ತಿಗೆ ಗೋಪುರವಾಗುವಂತೆ ಮುಂಚಾಚಿದ ಕಟಾಂಜನ ಮಂಟಪವಿದ್ದು ಅವುಗಳಲ್ಲಿ ಕುಳಿತ ಸುಲ್ತಾನನ್ನು ದೈನಂದಿನ ದರ್ಬಾರ್ ಕಾರ್ಯಗಳನ್ನು ನಡೆಸುತ್ತಿದ್ದನು.
ಇದರ ಕೆಳಭಾಗದಲ್ಲಿ ಕೋಣೆ ಇದ್ದು ಪ್ರಸ್ತುತ ಇದರಲ್ಲಿ ಒಂದು ಛಾಯಾಚಿತ್ರ ಸಂಗ್ರಹವಿದೆ. ಅರಮನೆಯ ಗೋಡೆಗೆ ಹೊಂದಿಸಿರುವ ಒಂದು ಶಾಸನದಲ್ಲಿ ಇದನ್ನು ಸಂತೋಷದ ಆವಾಸ ಸ್ಥಾನ ಮತ್ತು ಸ್ವರ್ಗದ ವೈರಿ ಎಂದು ಬಣ್ಣಿಸಲಾಗಿದೆ.
1799 ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪತನದ ನಂತರ ಈ ಅರಮನೆಯನ್ನು ಬ್ರಿಟಿಷರು ತಮ್ಮ ಕಾರ್ಯ ಕಲಾಪಗಳ ಕಚೇರಿಯನ್ನಾಗಿ ಬಳಸಿಕೊಂಡಿದ್ದರು. ಬಹಳ ವರ್ಷಗಳ ತನಕ ಇಲ್ಲಿಂದಲೇ ಕಾರ್ಯ ಕಲಾಪಗಳು ಹಾಗೂ ರಾಜ್ಯದ ಆಗುಹೋಗುಗಳನ್ನು ನಿರ್ಧರಿಸುವ ಒಂದು ಪ್ರಮುಖ ಆಡಳಿತ ಕೇಂದ್ರವಾಗಿ ಮುಂದುವರೆದಿತ್ತು.
ಬೆಂಗಳೂರಿನ ಅತ್ಯಂತ ಜನನಿಬಿಡ ಹಾಗೂ ಸದಾ ಕಾಲ ಜನಜಂಗುಳಿಯಿಂದ ಕೂಡಿರುವ ಚಾಮರಾಜಪೇಟೆಯಲ್ಲಿ ಈ ಅರಮನೆ ಇದ್ದು ಇದರ ಒಳಾಂಗಣದಲ್ಲಿ ಅತ್ಯಂತ ನಿಶಬ್ದ ಹಾಗೂ ಪ್ರಶಾಂತ ವಾತಾವರಣ ಕಂಡುಬರುತ್ತದೆ. ಇದರ ಹತ್ತಿರದ ತನಕ ಮೆಟ್ರೋ ರೈಲು ಸೇವೆ ಹಾಗೂ ನಗರ ಸಾರಿಗೆ ಲಭ್ಯವಿದೆ. ವರ್ಷದ ಎಲ್ಲಾ ದಿನಗಳಂದು ಈ ಅರಮನೆಯ ತೆರೆದಿರುತ್ತದೆ. ಅರಮನೆಯ ಎದುರುಭಾಗದಲ್ಲಿ ಸುಂದರವಾದ ಹೂ ತೋಟವಿದ್ದು ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳಬಹುದು. ಈಗ ಈ ಅರಮನೆಯು ಕೇಂದ್ರ ಸರ್ಕಾರದ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ಸುಪರ್ದಿನಲ್ಲಿದೆ.






















