ಸಿನಿಮಾಗಳಲ್ಲಿ ಒಳ್ಳೆಯದ್ದು ಇರುತ್ತೆ.. ಕೆಟ್ಟದ್ದು ಇರುತ್ತೆ.. ನಾವೂ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೇವೆ ಅನ್ನೋದು ಮುಖ್ಯವಾಗುತ್ತೆ. ಆದ್ರೆ ಇತ್ತಿಚೆಗೆ ಸಿನಿಮಾದಲ್ಲಿ ಅಪರಾಧ ಮಾಡುವುದನ್ನೇ ಸಾಕಷ್ಟು ಜನ ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ. ಸಾಕಷ್ಟು ಅಪರಾಧ ಸುದ್ದಿಗಳು ಸಿನಿಮಾವನ್ನೇ ಹೋಲುವಂತಿದೆ. ಅಂದ್ರೆ ಸಿನಿಮಾದಲ್ಲಿ ಅಪರಾಧವನ್ನೇ ಇವ್ರು ಫಾಲೋ ಮಾಡಲು ಹೊರಟು ಪೊಲೀಸರ ಅತಿಥಿಗಳಾಗುತ್ತಿದ್ದಾರೆ.
ಇದೀಗ ದೃಶ್ಯಂ ಸಿನಿಮಾದ ರೀತಿಯೇ ಅಪರಾಧವೆಸಗಿ ಇಡೀ ಕುಟುಂಬ ಸಮೇತ ಈಗ ಜೈಲಲ್ಲಿ ಒಂದು ಎರಡು ಮೂರು ಅಂತ ಎಣಿಸೋ ಪರಿಸ್ಥಿತಿ ತಂದುಕೊಂಡಿದೆ ಅಲ್ಲೊಂದು ಕುಟುಂಬ. ಇದು ಬೇರೆಲ್ಲೋ ನಡೆದಿರೋದಲ್ಲ ಬೆಂಗಳೂರಿನ ಆನೇಕಲ್ ನಲ್ಲಿ ನಡೆದಿರೋದು. ಕುಟುಂಬದ ಮುಖ್ಯಸ್ಥ ರವಿ (56), ಮಿಥುನ್ ಕುಮಾರ್(30), ಸಂಗೀತಾ, ಆಶಾ, ನಲ್ಲು ಚರಣ್ ಪೊಲೀಸರ ಅತಿಥಿಗಳಾಗಿದ್ದಾರೆ.
ಈ ಕುಟುಂಬದವರು ನಾಟಕದ ಮೂಲಕ ಹಣ ಪಡೆಯಲು ಹೋಗಿದ್ದಾರೆ. ತಮ್ಮ ಚಿನ್ನವನ್ನ ಸ್ನೇಹಿತನ ಸಹಾಯದಿಂದ ಅಡವಿಡಿಸಿ, ಆ ಬಳಿಕ ಪೊಲೀಸರ ಬಳಿ ಹೋಗಿ ನಮ್ಮ ಚಿನ್ನ ಕಳೆದು ಹೋಗಿದೆ ಅ.ತ ಕಂಪ್ಲೈಂಟ್ ಕೊಟ್ಟಿದ್ದಾರೆ. ಪಾಪ ಪೊಲೀಸರಿಗೇನು ಗೊತ್ತು. ಕೇಸ್ ದಾಖಲಿಸಿಕೊಂಡು ಒಮ್ಮೆ ಚಿನ್ನವನ್ನ ತಂದು ಕೊಟ್ಟಿದ್ದಾರೆ.
ಒಮ್ಮೆ ಪೊಲಿಕಸರನ್ನು ಯಾಮಾರಿಸಿದ್ದೆ ತಡ. ಮತ್ತೊಮ್ಮೆ ಅದೇ ನಾಟಕವನ್ನ ರಿಪೀಟ್ ಮಾಡಿದ್ದಾರೆ. ಡ್ರೈವರ್ ಜೊತೆ ಸೇರಿ ಆತನ ಮಗಳನ್ನ ಛೂ ಬಿಟ್ಟಿದ್ದಾರೆ. ಆಶಾ ಎಂಬಾಕೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ನಾನು ಶಾಪಿಂಗ್ ಹೋಗಿದ್ದಾಗ ಯಾರೋ ನನ್ನ ಬ್ಯಾಗ್ ಕಿತ್ತೊಯ್ದಿದ್ದಾರೆ. ಅದರಲ್ಲಿ 30 ಸಾವಿರ ಹಣ, ಒಂದು ಮೊಬೈಲ್ ಫೋನ್ ಮತ್ತು 1250 ಗ್ರಾಂನಷ್ಟು ಚಿನ್ನ ಇತ್ತು ಎಂದು ದೂರು ನೀಡಿದ್ದಾಳೆ.
ಕೇಸ್ ದಾಖಲಿಸಿಕೊಂಡ ಪೊಲೀಸರು, ಶಾಪಿಂಗ್ ಮಾಡಿದ ಜಾಗಕ್ಕೆ ಹೋಗಿ ಸಿಸಿಟಿವಿ ಚೆಕ್ ಮಾಡ್ತಾರೆ. ಆಗ ಮುಂಚೆಯೇ ಫ್ಲ್ಯಾನ್ ಮಾಡಿದ್ದ ಕಾರ್ ಡ್ರೈವರ್ ತಗಲಾಕಿಕೊಂಡಿದ್ದಾನೆ. ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಂತೆ ಅಡವಿಟ್ಟ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆ ಬಳಿಕ ಪೊಲೀಸರು ಚಿನ್ನವನ್ನೇನೋ ದೂರು ಕೊಟ್ಟವರಿಗೆ ನೀಡಿದ್ದಾರೆ. ಆದ್ರೆ ತಕ್ಷಣ ಆ ಚಿನ್ನ ನೋಡಿದ ಪೊಲೀಸರಿಗೆ ಅನುಮಾನ ಬಂದಿದೆ. ಅದರಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಾಕುವಂತ ಡಿಸೈನ್ ಕೂಡ ಇದ್ದಿದ್ರಿಂದ ಅನುಮಾನ ಬಂದಿದ್ದು, ಕಾರು ಡ್ರೈವರ್ ಗೆ ಮತ್ತೊಮ್ಮೆ ರುಬ್ಬಿದ್ದಾರೆ. ಬಳಿಕ ಆತ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ.