ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ದೇಶದ 73 ನೇ ಗಣರಾಜ್ಯೋತ್ಸವ ದಿನದಂದೇ ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಫೋಟೋವನ್ನು ತೆಗೆಸಿ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರವರ ಸೊಕ್ಕಿನ ವರ್ತನೆಯನ್ನು ವಿರೋಧಿಸಿ ನ್ಯಾಯವಾದಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕೃಷ್ಣಕುಮಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನ್ಯಾಯಾಲಯದ ಆವರಣದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನ್ಯಾಯವಾದಿಗಳು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ವಕೀಲರ ಸಂಘದ ಅಧ್ಯಕ್ಷ ಶಿವುಯಾದವ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿಕೊಂಡ ದಿನದಂದೇ ಗಣರಾಜ್ಯೋತ್ಸವ ಧ್ವಜಾರೋಹಣದಲ್ಲಿ ಗಾಂಧಿಜಿಯವರ ಫೋಟೋ ಜೊತೆ ಇರಿಸಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಸಂವಿಧಾನಕ್ಕೆ ಅಪಮಾನ ಮಾಡಿರುವುದನ್ನು ನೋಡಿದರೆ ಮಲ್ಲಿಕಾರ್ಜುನಗೌಡ ನ್ಯಾಯಾಧೀಶರ ಹುದ್ದೆಯಲ್ಲಿರಲು ನಾಲಾಯಕ್ ಎನ್ನುವುದು ಗೊತ್ತಾಗುತ್ತದೆ. ಕೂಡಲೆ ಇವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ರಾಜ್ಯಪಾಲರು ಕೂಡಲೆ ಮಧ್ಯ ಪ್ರವೇಶಿಸಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ದ ಕ್ರಮಕ್ಕೆ ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯವಾದಿಗಳ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ ಮಾತನಾಡುತ್ತ ಸಂವಿಧಾನಬದ್ದವಾಗಿ ನ್ಯಾಯಾಧೀಶರ ಹುದ್ದೆಗೆ ನೇಮಕಗೊಂಡಿರುವ ಮಲ್ಲಿಕಾರ್ಜುನಗೌಡ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವುದನ್ನು ಸಹಿಸಲು ಆಗುವುದಿಲ್ಲ. ಹಾಗಾಗಿ ಇವರ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಂಗ ಇಲಾಖೆ, ನ್ಯಾಯಾಧೀಶರ ಶ್ರೇಷ್ಟತೆಗೆ ಧಕ್ಕೆ ತಂದಂತಾಗುತ್ತದೆ ಎಂದು ಸರ್ಕಾರದ ಗಮನ ಸೆಳೆದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ, ವಕೀಲರುಗಳಾದ ಕೆ.ಎಂ.ಅಜ್ಜಯ್ಯ, ಬಿ.ಆರ್.ವಿಶ್ವನಾಥರೆಡ್ಡಿ, ಎ.ಸೈಯದ್ ನಜೀಬುಲ್ಲಾ, ರವಿ ಸಿದ್ದಾರ್ಥ ಟಿ, ಸಿ.ಎಸ್.ರವೀಂದ್ರ, ಸುದರ್ಶನ್, ನರಹರಿ, ವೆಂಕಟೇಶ್, ಎಸ್.ಓ.ಸಕ್ರಯ್ಯ, ಬಿ.ಇ.ಪ್ರದೀಪ್, ಕೆ.ಶ್ರೀರಾಮು, ಗಿರೀಶ್ ಬಿ, ಟಿ.ಶಿವಮೂರ್ತಿ, ಗೀತಾಂಜಲಿ ಬಿ, ಆರ್.ರಜಿನಿ, ಸಾಕಮ್ಮ ಟಿ, ಎಸ್.ಓ.ಜಗದೀಶ್ ಗುಂಡೇರಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.