ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ತಾಲ್ಲೂಕಿನಾದ್ಯಂತ ಪ್ರತಿ ಶಾಲಾ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣ ತಲುಪಬೇಕಾಗಿರುವುದರಿಂದ ಶಿಕ್ಷಕ-ಶಿಕ್ಷಕಿಯರು ಕಾರ್ಯೋನ್ಮುಖರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಸ್ಕೌಟ್ ಮತ್ತು ಗೈಡ್ಸ್ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು.
ಬೇಸಿಗೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಶಿಕ್ಷಣ ನೀಡಬೇಕಾಗಿರುವುದರಿಂದ ತರಬೇತಿ ರಹಿತ ಶಾಲಾ ಶಿಕ್ಷಕರುಗಳನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಿಕೊಂಡು ತರಬೇತಿ ನೀಡುವಂತೆ ಸೂಚಿಸಿದರು.
ಎಳೆ ಮಕ್ಕಳಲ್ಲಿ ಸ್ವಾವಲಂಬನೆ, ಪರೋಪಕಾರದ ಗುಣಗಳನ್ನು ಬಿತ್ತಲು ಶಿಕ್ಷಣ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ನೂತನ ವರ್ಷದಲ್ಲಿ ತಾಲ್ಲೂಕಿನಾದ್ಯಂತ ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಹಮ್ಮಿಕೊಂಡು ಜಿಲ್ಲೆಗೆ ಮಾದರಿಯಾಗುವಂತೆ ಶಿಕ್ಷಕ-ಶಿಕ್ಷಕಿಯರಿಗೆ ಸಲಹೆ ನೀಡಿದರು.
ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪರಿಷತ್ ಸದಸ್ಯ ಬಸವರಾಜಪ್ಪ ಮಾತನಾಡಿ ಸಾಮಾಜಿಕ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಮಕ್ಕಳಲ್ಲಿ ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣವನ್ನು ತುಂಬಬೇಕಿದೆ ಎಂದರು.
ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಬಾಬುಲಾಲ್‍ಜೈನ್ ಮಾನಾಡುತ್ತ ಶಿಕ್ಷಣ ಇಲಾಖೆ ಸಹಕಾರದಿಂದ ತಾಲ್ಲೂಕಿನಾದ್ಯಂತ ಬಿರುಸಿನ ಚಟುವಟಿಕೆಗಳನ್ನು ಹಮ್ಮಿಕೊಂಡು ಉತ್ತಮ ತಾಲ್ಲೂಕು ಪ್ರಶಸ್ತಿಗೆ ಭಾಜನರಾಗಿ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಸದರ ಬಳಿ ನಿಯೋಗ ಹೋಗಿ ಅನುದಾನ ಮಂಜೂರು ಮಾಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಟಿಪಿಓ.ಸುರೇಶ್, ಖಜಾಂಚಿ ಗಂಗಾಧರರೆಡ್ಡಿ, ಉಪಾಧ್ಯಕ್ಷ ಪ್ರಸನ್ನಕುಮಾರ್, ಗುರುಮೂರ್ತಿ, ಶಿಕ್ಷಕರುಗಳಾದ ವಿಶ್ವನಾಥ್, ನೂರ್ ಫಾತಿಮ, ತಸ್ಮಿಯ, ಬಶೀರ, ಶೇಖರ್‍ನಾಯ್ಕ, ತಿಪ್ಪೇಸ್ವಾಮಿ, ವಿನಯ್ ಇತರೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.



















