ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಈ ಬಾರಿ “ಸಂಪಾಯಿತಲೇ ಪರಾಕ್” ಎಂಬ ಭವಿಷ್ಯವಾಣಿ ನಾಡಿನ ಮಳೆ, ಬೆಳೆ ಹಾಗೂ ಸಮೃದ್ಧಿಗೆ ಶುಭ ಸೂಚನೆ ನೀಡಿದೆ. ಜಾತ್ರಾ ಮಹೋತ್ಸವದ ವೇಳೆ ಗೊರವಯ್ಯ ನೀಲಪ್ಪ ಮಾಕಪ್ಪ ಅವರು ಕಾರ್ಣಿಕ ನುಡಿದು ಭಕ್ತರ ಗಮನ ಸೆಳೆದರು.
“ಮುತ್ತು ಉತ್ಪತ್ತಿ ಆಯಿತು; ಶಿಶುವಿಗೆ ಹಾಲೇರಿಯಿತಲೇ ಪರಾಕ್” ಎಂಬ ಕಾರ್ಣಿಕದ ಅರ್ಥ, ಈ ವರ್ಷ ಉತ್ತಮ ಮಳೆ ಹಾಗೂ ಉತ್ತಮ ಬೆಳೆ ಉಂಟಾಗಲಿದೆ ಎಂಬುದಾಗಿ ಭಕ್ತರು ವಿಶ್ಲೇಷಿಸಿದ್ದಾರೆ.

ಕಾರ್ಣಿಕ ನುಡಿದ ಕ್ಷಣದಲ್ಲಿ ಭಕ್ತರು “ಏಳು ಕೋಟಿ, ಏಳು ಕೋಟಿಗೋ.. ಛಾಂಗ್ ಮಲೋ” ಎಂದು ಘೋಷಣೆ ಕೂಗಿ ಭಕ್ತಿಭಾವ ವ್ಯಕ್ತಪಡಿಸಿದರು.ಮಾರ್ಚ್ 1ರಿಂದ 22ರವರೆಗೆ ನಾಲ್ಕು ಭಾನುವಾರಗಳ ಕಾಲ ಮೈಲಾರಲಿಂಗೇಶ್ವರ ದೇವರಿಗೆ ಹಣ್ಣು-ಕಾಯಿ ಸಮರ್ಪಣೆ, ಪಲ್ಲಕ್ಕಿ ಉತ್ಸವ ಹಾಗೂ ಡೋಣಿ ತುಂಬಿಸುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ರಾಮನವಮಿ ದಿನ ಬೆಳಗ್ಗೆ ಭಕ್ತರಿಂದ ಹಣ್ಣು-ತುಪ್ಪ ಡೋಣಿ ತುಂಬಿಸಿ, ನಂತರ ಪಲ್ಲಕ್ಕಿ ಉತ್ಸವ ಗ್ರಾಮದೆಲ್ಲೆಡೆ ಸಂಚರಿಸಿತು. ಡೊಳ್ಳು, ಮಜಲು, ಭಜನೆಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನೆರವೇರಿತು.
ಕಾರ್ಣಿಕದ ತಾತ್ಪರ್ಯ ಈ ವರ್ಷ ಮಳೆ-ಬೆಳೆ ಉತ್ತಮವಾಗಿ, ಜನರ ಜೀವನದಲ್ಲಿ ಸಮೃದ್ಧಿ ನೆಲೆಸಲಿದೆ ಎಂಬುದಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಮುಂದೆ ಗೊರವಯ್ಯರು ಕಬ್ಬಿಣದ ಸರಪಳಿಗಳನ್ನು ಹರಿದು ಸರಪಳಿ ಪವಾಡ ಪ್ರದರ್ಶಿಸಿದರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.ಇದಲ್ಲದೆ “ಮುತ್ತಿನ ಗಿಣಿ” ಕಾರ್ಣಿಕವು ಅಂಬಲಿ ರಾಶಿಗೆ ಸಮೃದ್ಧಿಯ ಸಂಕೇತವಾಗಿದ್ದು, ಇದೂ ಧನಾತ್ಮಕ ಸೂಚನೆ ನೀಡುತ್ತದೆ ಎಂದು ಹೇಳಲಾಗಿದೆ.










