ಟೆಲ್ ಅವಿವ್ : ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್–ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ಇಸ್ರೇಲ್ನ ಟೆಲ್ ಅವಿವ್ ನಗರ ಆಕಾಶದಲ್ಲಿ ಸಾವಿರಾರು ಕಾಗೆಗಳು ಗುಂಪಾಗಿ ಸುತ್ತುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕಕ್ಕೆ ಕಾರಣವಾಗಿದೆ.ಈ ವಿಡಿಯೋದಲ್ಲಿ ನೂರಾರು ಕಾಗೆಗಳು ಆಕಾಶದಲ್ಲಿ ವಲಯ ರೂಪದಲ್ಲಿ ಹಾರುತ್ತಿರುವುದು ಕಾಣಿಸಿಕೊಂಡಿದ್ದು, X ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವೇಗವಾಗಿ ಹರಡುತ್ತಿದೆ.
ಯುದ್ಧ ಭೀತಿಯ ನಡುವೆ ಈ ದೃಶ್ಯ ಜನರಲ್ಲಿ ಆತಂಕ ಹೆಚ್ಚಿಸಿದ್ದು, ಇದನ್ನು ಕೆಲವರು ಅಪಶಕುನದ ಸಂಕೇತವೆಂದು ವ್ಯಾಖ್ಯಾನಿಸುತ್ತಿದ್ದಾರೆ.
ಕೆಲವರು ಈ ಘಟನೆಯನ್ನು ಧಾರ್ಮಿಕ ಹಾಗೂ ಜ್ಯೋತಿಷ್ಯದ ದೃಷ್ಟಿಯಿಂದ ನೋಡಿ “ವಿನಾಶದ ಮುನ್ನೋಟ” ಎಂದು ಹೇಳುತ್ತಿದ್ದರೆ, ಮತ್ತೊಬ್ಬರು ಇದನ್ನು ಮುಂದಿನ ಅಪಾಯಗಳ ಸೂಚನೆ ಎಂದು ಕೊಂಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಹರಿದಾಡುತ್ತಿವೆ.ಆದರೆ ತಜ್ಞರು ಈ ಕುರಿತು ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣವಾಗಿ ನೈಸರ್ಗಿಕ ಘಟನೆಯಾಗಿರಬಹುದು ಎಂದು ಹೇಳಿದ್ದಾರೆ. ಕಾಗೆಗಳು ಸಾಮಾನ್ಯವಾಗಿ ಆಹಾರ ಹುಡುಕಲು, ಹವಾಮಾನ ಬದಲಾವಣೆಯಿಂದ ರಕ್ಷಿಸಿಕೊಳ್ಳಲು ಅಥವಾ ಗುಂಪು ರಕ್ಷಣೆಯ ಸಲುವಾಗಿ ದೊಡ್ಡ ಸಂಖ್ಯೆಯಲ್ಲಿ ಸೇರುವುದೇ ಸಾಮಾನ್ಯ.

ವಲಸೆ, ಪರಿಸರ ಹಾಗೂ ಆಹಾರ ಲಭ್ಯತೆ ಇಂತಹ ಕಾರಣಗಳಿಂದ ಈ ರೀತಿಯ ಗುಂಪು ಹಾರಾಟ ಸಂಭವಿಸುತ್ತದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ, ಈ ವಿಡಿಯೋ ನಿಜವಾಗಿಯೂ ಟೆಲ್ ಅವಿವ್ನಲ್ಲೇ ಚಿತ್ರೀಕರಿಸಲ್ಪಟ್ಟಿದೆಯೇ ಎಂಬುದರ ಬಗ್ಗೆ ಅಧಿಕೃತ ದೃಢೀಕರಣ ಇಲ್ಲ. ಆದರೂ, ವೈರಲ್ ದೃಶ್ಯವು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಯುದ್ಧದ ಆತಂಕದ ನಡುವೆಯೇ ಜನರಲ್ಲಿ ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟಿಸಿದೆ.



















