ವದರಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ಜ.25) : ವಂತಿಕೆಯನ್ನು ಶೀಘ್ರವಾಗಿ ಕಟ್ಟಿ, ಮನೆಯ ನಿರ್ಮಾಣದ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭ ಮಾಡಲಾಗುವುದು ಎಂದು ಫಲಾನುಭವಿಗಳಿಗೂ, ಕಾಮಗಾರಿಯನ್ನು ಕಾಟಾಚಾರಕ್ಕೆ ಮಾಡಬೇಡಿರೆಂದು ಗುತ್ತಿಗೆದಾರರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚನೆ ನೀಡಿದರು.
ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ನಿರ್ಮಾಣವಾಗುತ್ತಿರುವ 1518 ಮನೆಗಳ ಫಲಾನುಭವಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊಳಚೆ ಪ್ರದೇಶಗಳಿಗೆ ಸ್ಲಂ ಎಂದು ಘೋಷಣೇ ಮಾಡುವುದರ ಮೂಲಕ ಸರ್ಕಾರ ನಿಮಗೆ ರಕ್ಷಣೆಯನ್ನು ನೀಡಿದೆ.
ಈಗ ಮನೆಯನ್ನು ನಿರ್ಮಾಣ ಮಾಡಿಕೊಡಲು ಮುಂದಾಗಿದೆ. ಸ್ವಲ್ಪ ಪ್ರಮಾಣದಲ್ಲಿ ವಂತಿಕೆಯನ್ನು ನೀವುಗಳು ಕಟ್ಟಿದರೆ ಉಳಿದ ವಂತಿಕೆಯನ್ನು ಕೇಂದ್ರ ಮತ್ತು ಸಾಲದ ಮೂಲಕ ಸುಮಾರು 7 ರಿಂದ 8 ಲಕ್ಷ ರೂ.ವೆಚ್ಚದ ಮನೆಯನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನಗರದ ಹಲವೆಡೆಗಳಲ್ಲಿ 30 ವರ್ಷದ ಹಿಂದೆ ಕೊಳಚೆ ಪ್ರದೇಶಗಳಾಗಿದ್ದವು ಅವುಗಳನ್ನು ಸರ್ಕಾರದವತಿಯಿಂದ ಕೊಳಚೆ ನಿರ್ಮೂಲನಾ ಮಂಡಳಿಯವತಿಯಿಂದ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಲಾಗಿತ್ತು. ಇದರಿಂದ ನಿಮಗೆ ಈಗ ಉಪಯೋಗವಾಗಿದೆ. ಸರ್ಕಾರದವತಿಯಿಂದ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ.
ಮನೆ ನಿರ್ಮಾಣದ ಸಮಯದಲ್ಲಿ ಗುತ್ತಿಗೆದಾರರ ಮೇಲೆ ಗಮನವಿರಲಿ, ನಿಮಗೆ ಯಾವ ರೀತಿ ಬೇಕೊ ಆ ರೀತಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಿ, ಕಳಪೆ ಕಾಮಗಾರಿಗೆ ಅವಕಾಶವನ್ನು ನೀಡಬೇಡಿ ಆ ರೀತಿ ಏನಾದರೂ ಕಂಡು ಬಂದರೆ ನನ್ನ ಗಮನಕ್ಕೆ ತರುವಂತೆ ಶಾಸಕರು ಹೇಳಿದರು.
ಈಗಾಗಲೇ ನಗರದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಅದರ ಸಮಸ್ಯೆಯನ್ನು ನಿವಾರಣೆ ಮಾಡಲಾಗಿದೆ. ಇದೇ ರೀತಿ ಕುಡಿಯುವ ನೀರನ್ನು ಸಹಾ ನೀಡಲಾಗಿದೆ ಮುಂದಿನ ದಿನದಲ್ಲಿ 24*7 ನೀರನ್ನು ನೀಡಲಾಗುವುದು ಇದಕ್ಕೆ ಮೀಟರನ್ನು ಅಳವಡಿಸುವುದರ ಮೂಲಕ ನೀವು ಬಳಕೆ ಮಾಡಿದಷ್ಟು ಹಣವನ್ನು ಕಂದಾಯ ರೂಪದಲ್ಲಿ ಪಾವತಿ ಮಾಡಬೇಕಿದೆ ಎಂದು ತಿಳಿಸಿದ ಶಾಸಕರು, ಈಗಾಗಲೇ ಬುರುಜನಹಟ್ಟಿ, ಬಿವಿಕೆ ಲೇಔಟ್‍ನಲ್ಲಿ ಪೈಪ್ ಮೂಲಕ ಗ್ಯಾಸ್ ಸಂಪರ್ಕವನ್ನು ನೀಡುವ ಕಾರ್ಯ ನಡೆಯುತ್ತಿದೆ ಮುಂದಿನ ದಿನದಲ್ಲಿ ನಿಮಗೂ ಸಹಾ ಗ್ಯಾಸ್‍ನ್ನು ಪೈಪ್ ಮೂಲಕ ನೀಡಲಾಗುವುದು ಬಳಕೆ ಮಾಡಿದಕ್ಕೆ ಮಾತ್ರ ಹಣವನ್ನು ಪಾವತಿ ಮಾಡಬೇಕಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ನಗರದ ವೆಂಕಟೇಶ್ವರ ಟಾಕೀಸ್ ಮುಂಬಾಗ, ಜೆಜೆಹಟ್ಟಿ ಮತ್ತು ಹೊಳಲ್ಕೆರೆ ರಸ್ತೆಯ ಹಳದಿ ಏರಿಯಾದಲ್ಲಿ ಜಾಗದ ಕೊರತೆಯಿಂದಾಗಿ ಜಿ+2 ಮಾದರಿಯಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮನೆ ಬೇಕು ಎಂದು ಸಾವಿರಾರೂ ಅರ್ಜಿಗಳು ಬಂದಿದೆ ಆದರೆ, ಮನೆ ನಿರ್ಮಾಣಕ್ಕೆ ಹಣ ನೀಡಿದರು ಸಹಾ ಜಾಗ ಸಿಗುತ್ತಿಲ್ಲ, ಶೀಘ್ರವಾಗಿ ನಿಮ್ಮ ಪಾಲಿನ ವಂತಿಕೆಯನ್ನು ಕಟ್ಟುವುದರ ಮೂಲಕ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲು ಅವಕಾಶ ನೀಡುವಂತೆ ಹೇಳಿದರು.
1518 ಮನೆಗಳಲ್ಲಿ 292 ಮನೆಗಳು ಜಿ+2 ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.1226 ಮನೆಗಳು ನೆಲ ಅಂತಸ್ತಿನಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಕಾಮನಬಾವಿ ಬಡಾವಣೆಯಲ್ಲಿ 389, ಚಲುವಾದಿ ಕಾಲೋನಿಯಲ್ಲಿ 133 ಸಿ.ಕೆ.ಪುರದಲ್ಲಿ 252 ಹಾಗೂ ಕವಾಡಿಗರ ಹಟ್ಟಿಯಲ್ಲಿ 457 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಇದಕ್ಕಾಗಿ 82 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ 292 ಮನೆಗಳನ್ನು ನಗರದ ಮೂರು ಕಡೆಗಳಲ್ಲಿ 19 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್, ಸದಸ್ಯರಾದ ಭಾಸ್ಕರ್, ಹರೀಶ್,ಮಾಜಿ ಸದಸ್ಯರಾಧ ವೆಂಕಟೇಶ್, ಮುಖಂಡರಾದ ಪೂಜಾ ಯೋಗಿ. ಮಂಜುನಾಥ್, ಅಂಜನಪ್ಪ, ಜಯಣ್ಣ, ರಮೇಶ್ಚಾರ್, ಕೃಷ್ಣ, ತಿಮ್ಮಣ್ಣ, ಸುರೇಶ್, ಅಲ್ತಾಫ್, ದೀಲಿಪ್, ಮಹಾಂತೇಶ್, ಸತೀಶ್, ವಿರೇಶ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.