ನವದೆಹಲಿ: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ಉಪಸ್ಥಿತಿಯಲ್ಲಿ ರಾಜ್ಯ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ರಾಜ್ಯದಲ್ಲಿ ತಂಬಾಕು ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳೊಂದಿಗೆ ಅತ್ಯಂತ ಫಲಪ್ರದ ಮಾತುಕತೆ ನಡೆಸಲಾಯಿತು.
ಈ ಕೂಡಲೇ ತಂಬಾಕು ಖರೀದಿ ಮಾಡುವುದು, ವಿದೇಶಿ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರರ ಹಲವಾರು ಪ್ರಮುಖ ಮನವಿಗಳಿಗೆ ಗೋಯಲ್ ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಧಾವಿಸಿ ಬರುವಂತೆ ಸೂಚಿಸಿದರು.
ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮಂತ್ರಿ ಸಾ.ರಾ. ಮಹೇಶ್ ಅವರು, ಮೈಸೂರು – ಕೊಡಗು ಸಂಸದ ಯದುವೀರ ಒಡೆಯರ್ ಅವರು, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಕೋಲಾರ ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ ಅವರು, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕೃಷ್ಣನಾಯಕ ಅವರು ಸಚಿವರೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿದ್ದರು.
ಇದಕ್ಕೆ ಪ್ರತಿಫಲವೂ ಸಿಕ್ಕಿದ್ದು, ಸೋಮವಾರದಿಂದಾನೇ ತಂಬಾಕನ್ನು ಖರೀದಿ ಮಾಡಲು ಒಪ್ಪಿಗೆ ನೀಡಿದೆ. 190 ದೇಶಗಳ ರಾಯಭಾರಿಗಳಿಗೆ ಪತ್ರ ಬರೆದು ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಕೋರಿಕೆ ಸಲ್ಲಿಸಲಾಗುವುದು. ಈವರೆಗೆ ರಪ್ತು ಮಾಡದಿರುವ ದೇಶಗಳಿಗೂ ತಂಬಾಕು ರಪ್ತು ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವರು ಭರವಸೆ ನೀಡಿರೋದಾಗಿ ಸಾ.ರಾ.ಮಹೇಶ್ ಹೇಳಿದ್ದಾರೆ.






