ಚಿತ್ರದುರ್ಗ | ಹಜ್ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 13 : ಹಜ್ ಯಾತ್ರೆಗೆ ಹೋಗುವವರು ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಶುದ್ದವಾದ ನೀರು, ಆಹಾರವನ್ನು ಸೇವಿಸಿ ಸುರಕ್ಷಿತವಾಗಿ ಹಿಂದಿರುಗುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಮನವಿ ಮಾಡಿದರು.

 

ಕರ್ನಾಟಕ ಸರ್ಕಾರ ಹಾಗೂ ಹಜ್ ಸಮಿತಿಯಿಂದ ಜಿಲ್ಲಾಸ್ಪತ್ರೆಯ ಡಾ.ಬಿ.ಸಿ.ರಾಯ್ ಸಭಾಂಗಣದಲ್ಲಿ ಶುಕ್ರವಾರ ಹಜ್ ಯಾತ್ರಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ
ತಪಾಸಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹಜ್‍ನಲ್ಲಿ ನೂಕು ನುಗ್ಗಲಿರುತ್ತದೆ. ಅವಸರ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಯಾತ್ರೆಯನ್ನು ಮುಗಿಸಿ. ಅಲ್ಲಿಯೂ ಆರೋಗ್ಯ ತಪಾಸಣೆಗೆ ಕ್ಯಾಂಪ್‍ಗಳಿರುತ್ತವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡವಿರುವವರು ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ಸೇವಿಸಿ ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರ ವಹಿಸುವಂತೆ ಡಾ.ರವೀಂದ್ರ ಸೂಚಿಸಿದರು.

ಆರ್.ಸಿ.ಹೆಚ್.ಅಧಿಕಾರಿ ಡಾ.ಅಭಿನವ ಮಾತನಾಡಿ ದೇವರ ಕೆಲಸವೆಂದರೆ ಪುಣ್ಯದ ಕೆಲಸವಿದ್ದಂತೆ ಪ್ರತಿ ವರ್ಷವೂ ಹಜ್ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಲಸಿಕೆಗಳನ್ನು ನೀಡಲಾಗುವುದು. ಪೋಲಿಯೋ ಮಾದರಿ ಒಂದು ಲಸಿಕೆ, ನಿಮೋನಿಯಾ ಹಾಗೂ ಮೆದುಳು ಜ್ವರ ಹರಡದಂತೆ ಲಸಿಕೆ ಕೊಡಲಾಗುತ್ತದೆ. ಎರಡು ಇಂಜೆಕ್ಷನ್ ಒಂದು ಡ್ರಾಪ್ಸ್ ನೀಡಲಾಗುವುದು. ಒಟ್ಟು ಮೂರು ಹಂತದಲ್ಲಿ ಲಸಿಕೆ ಕೊಟ್ಟು ಹಜ್‍ಗೆ ಯಾತ್ರಾರ್ಥಿಗಳನ್ನು ಕಳಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

 

ಹಜ್ ಕಮಿಟಿ ಕಾರ್ಯದರ್ಶಿ ಹಾಜಿ ಆರ್.ದಾದಾಪೀರ್ ಮಾತನಾಡಿ ಹಜ್ ಯಾತ್ರಾರ್ಥಿಗಳ ಸೇವೆ ಮಾಡುವುದೆಂದರೆ ಪುಣ್ಯದ ಕೆಲಸ. ಲಾಟರಿ ಮೂಲಕ ಆಯ್ಕೆ ಮಾಡಿ ಹಜ್‍ಗೆ ಯಾತ್ರಾರ್ಥಿಗಳನ್ನು ಕಳಿಸಲಾಗುವುದು. ಸೃಷ್ಠಿಕರ್ತ ಪರಮಾತ್ಮನ ಬಳಿ ಹೋಗುವ ನೀವುಗಳು ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಕ್ಷೇಮದಿಂದ ಹಿಂದಿರುಗಿ ಎಂದು ಹಾರೈಸಿದರು.
ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ. ಕೊಲ್ಲಿ ರಾಷ್ಟ್ರಗಳ ನಡುವೆ ಯುದ್ದವಾಗುತ್ತಿರುವುದರಿಂದ ಪ್ರಪಂಚದ ಮನುಕುಲದ ಒಳಿತಿಗಾಗಿ ಕೂಡಲೆ ಯುದ್ದ ನಿಲ್ಲಿಸುವಂತೆ ಹಜ್‍ನಲ್ಲಿ ಪ್ರಾರ್ಥಿಸಿ. ವಿಧಿ ವಿಧಾನಗಳ ಪ್ರಕಾರ ಯಾತ್ರೆಗೆ ಯಾವುದೇ ತೊಂದರೆಯಿಲ್ಲದಂತೆ ಹಿಂದಿರುಗಿ ಎಂದು ಯಾತ್ರಾರ್ಥಿಗಳಲ್ಲಿ ವಿನಂತಿಸಿದರು.
ಡಾ.ಸತೀಶ್, ಡಾ.ನಿಖಿಲ್, ಡಾ.ಅರುಣಕುಮಾರಿ ಇವರುಗಳು ವೇದಿಕೆಯಲ್ಲಿದ್ದರು.

ಹಜ್ ಕಮಿಟಿಯ ಆದಿಲ್, ಸಾಧಿಕ್, ಮುಜಾಮಿಲ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು. 108 ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

Share This Article