ಹಗಲಿರುಳು ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ರಕ್ಷಣೆಯಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿಗೆ 10ನೇ ತಾರೀಖು ಪೂರ್ಣಗೊಂಡರೂ ವೇತನವಾಗೇ ಇಲ್ಲ. ಪೊಲೀಸ್ ಸಿಬ್ಬಂದಿಗೆ ಸಾಮಾನ್ಯವಾಗಿ ಪ್ರತಿ ತಿಂಗಳ 1ರಿಂದ 5ನೇ ತಾರೀಕಿನೊಳಗೆ ವೇತನ ಆಗುತ್ತದೆ ಆದರೆ, ಈ ಬಾರಿ ಇನ್ನೂ ವೇತನ ಬಿಡುಗಡೆಯಾಗಿಲ್ಲ. ಹಲವು ತಿಂಗಳಿಂದ ಹೀಗೆಯೇ ವಿಳಂಬ ಆಗುತ್ತಲೇ ಇದೆ. ಹಾಗಾಗಿ ಪೋಲಿಸರು ಸಂಕಷ್ಟ ಎದುರಿಸುವಂತಾಗಿದೆ.
ಈ ವೇತನ ವಿಳಂಬಕ್ಕೆ ಅನುದಾನದ ಕೊರತೆಯೇ ಕಾರಣ ಎನ್ನುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಕೇವಲ ಸಂಬಳ ವಿಳಂಬ ಮಾತ್ರವಲ್ಲದೆ, ಕರ್ತವ್ಯದ ವೇಳೆ ನೀಡಲಾಗುತ್ತಿದ್ದ ಭತ್ಯೆಯಲ್ಲೂ ಕಡಿತ ಮಾಡಿರುವುದು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊತ್ತಿರುವ ಪೊಲೀಸ್ ಸಿಬ್ಬಂದಿ ದಿನರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ದೊರೆಯದಿರುವುದು ಬೇಸರದ ಸಂಗತಿಯಾಗಿದೆ ಎಂದು ಕೆಲ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
ಸಂಬಳದ ಮೇಲೆ ಅವಲಂಬಿತರಾಗಿರುವ ಪೊಲೀಸ್ ಸಿಬ್ಬಂದಿ ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಶುಲ್ಕ, ಬ್ಯಾಂಕ್ ಸಾಲಗಳ ಕಂತು ಸೇರಿದಂತೆ ವಿವಿಧ ಖರ್ಚುಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ವೇತನ ವಿಳಂಬದಿಂದ ಕುಟುಂಬದ ಖರ್ಚುಗಳನ್ನು ನಿಭಾಯಿಸುವುದು ದುಸ್ತರವಾಗಿದೆ ಎಂದು ಸಿಬ್ಬಂದಿ ಅಳಲು ವ್ಯಕ್ತಪಡಿಸಿದ್ದಾರೆ.
ವೇತನ ತಡವಾಗಲು ಖಜಾನೆ (Treasury) ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ವಿಳಂಬ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ವೇತನ ಮಂಜೂರಾತಿ ಹಾಗೂ ಬಿಲ್ ಪ್ರಕ್ರಿಯೆ ಪೂರ್ಣಗೊಳ್ಳುವಲ್ಲಿ ತಡವಾಗಿರುವುದರಿಂದ ಸಿಬ್ಬಂದಿಗೆ ಸಂಬಳ ಜಮೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಮಸ್ಯೆಯನ್ನು ಸಂಬಂಧಿಸಿದ ಉನ್ನತ ಅಧಿಕಾರಿಗಳು ತಕ್ಷಣ ಗಮನಕ್ಕೆ ತೆಗೆದುಕೊಂಡು ಬಾಕಿ ಇರುವ ವೇತನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ






