ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಒಂದು ಸರ್ಕಾರಿ ಶಾಲೆ ಎಂದರೆ, ಅದು ಕೇವಲ ಕಟ್ಟಡವಲ್ಲ. ಅದು ಗ್ರಾಮದ ಅಸ್ಮಿತೆ. ಗ್ರಾಮೀಣ ಪ್ರದೇಶದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆದು ಎಲ್ಲಾ ಸೌಲಭ್ಯಗಳನ್ನು ಕೊಡುತ್ತೇವೆಂದು ಹೇಳುತ್ತಾ, ಅದರ ಸುತ್ತ ಮುತ್ತಲಿನ ಸಣ್ಣ ಸಣ್ಣ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಜನವಿರೋಧಿ ಕ್ರಮವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಪ್ರಗತಿಪರ ಚಿಂತಕರಾದ ಜೆ. ಯಾದವ ರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ಹೆಸರಲ್ಲಿ ರಾಜ್ಯಾದ್ಯಂತ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಜಿಲ್ಲೆಯಾದ್ಯಂತ 1152 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದನ್ನು ವಿರೋಧಿಸಿ ಇಂದು ನಗರದ ರೈತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಪೋಷಕರ ಅಭಿಪ್ರಾಯವನ್ನೂ ಕೇಳದೇ ಏಕಪಕ್ಷೀಯವಾಗಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅಪ್ರಜಾತಾಂತ್ರಿಕ ಕ್ರಮವಾಗಿದ್ದು, ಗ್ರಾಮೀಣ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿದಂತಾಗುತ್ತದೆ. ಆದ್ದರಿಂದ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡಬಾರದು. ನಮ್ಮ ಶಾಲೆಗಳನ್ನು ಉಳಿಸಿಕೊಳ್ಳಲು ಸಂಘಟಿತ ಹೋರಾಟ ಕಟ್ಟಬೇಕು” ಎಂದರು.
ರೈತ ಸಂಘಟನೆಯ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು ಅವರು ಮಾತನಾಡಿ “ರೈತರ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದು ಕೊಳ್ಳುವ ಕೆಪಿಎಸ್ ಶಾಲೆ ಯೋಜನೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ. ನಮ್ಮೂರ ಶಾಲೆ ಮುಚ್ಚಿದರೆ ನಮ್ಮ ಬದುಕು ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ಸರ್ಕಾರ ಶಾಲೆ ಮುಚ್ಚಿದರೆ ನಾವು ಮತದಾನವನ್ನೇ ಬಹಿಷ್ಕರಿಸಬೇಕಾಗುತ್ತದೆ” ಎಂದು ಸರ್ಕಾರವನ್ನು ಎಚ್ಚರಿಸಿದರು.
ಬರಹಗಾರರಾದ ಎಚ್. ಆನಂದ್‌ಕುಮಾರ್ ಮಾತನಾಡಿ “ಊರಿಗೊಂದು ಶಾಲೆ, ಪ್ರತಿಯೊಬ್ಬರಿಗೂ ಶಿಕ್ಷಣ ಎಂಬುದು ಪ್ರತಿಯೊಂದು ಹಳ್ಳಿಯ ಪ್ರತಿಯೊಂದು ಮಗುವಿನ ಹಕ್ಕು. ಅಂತಹ ಮೂಲಭೂತ ಹಕ್ಕನ್ನು ನಮ್ಮಿಂದ ಕಿತ್ತುಕೊಳ್ಳಲು ಬಿಡಬಾರದು.” ಎಂದರು.
ಸಮಾವೇಶದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿಎಸ್‌ಒ ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪ, “ಕೆಪಿಎಸ್ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನವಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾಂಗಣ ಇರಲಿದೆ. ವಿಷಯ ಶಿಕ್ಷಕರು ಇರುತ್ತಾರೆಂದು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಆದರೆ ವೃತ್ತಿ ಶಿಕ್ಷಣದ ಹೆಸರಲ್ಲಿ ಮಕ್ಕಳಿಗೆ ಆರನೇ ತರಗತಿಯಿಂದಲೇ ಅಡಿಕೆ ಸುಲಿಯುವುದು, ಕೂದಲು ಕತ್ತರಿಸುವುದು ಮೊದಲಾದ ಕಸುಬುಗಳನ್ನೇ ಕಲಿಸಲಾಗುತ್ತದೆ. ಈ ಮೂಲಕ ಬಡ ಮಕ್ಕಳನ್ನು ಅಗ್ಗದ ಕಾರ್ಮಿಕರನ್ನಾಗಿಯೇ ಉಳಿಸುವುದು ಸರ್ಕಾರದ ಹುನ್ನಾರ. ಮ್ಯಾಗ್ನೆಟ್ ಶಾಲೆ ಎಂದು ಹೆಸರಿಟ್ಟು ಅದರ ಸುತ್ತಲೂ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಈ ಶಾಲೆಗೆ ವಿಲೀನಗೊಳಿಸುವ ಯೋಜನೆ ಇದರ ಹಿಂದಿದೆ. ನಿಜವಾಗಿಯೂ ಸರ್ಕಾರಕ್ಕೆ ಗ್ರಾಮೀಣ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡುವ ಇಚ್ಛೆ ಇದ್ದರೆ ಎಲ್ಲಾ ಶಾಲೆಗಳನ್ನು ಉನ್ನತೀಕರಿಸಿ ಸಕಲ ಸೌಲಭ್ಯಗಳನ್ನು ಕೊಡಲಿ. ಆಗ ಯಾವೊಂದು ಮಗುವೂ ಖಾಸಗಿ ಶಾಲೆಗೆ ಹೋಗುವುದಿಲ್ಲ. ಅದರ ಬದಲಿಗೆ ಸರ್ಕಾರವೇ ಶಾಲೆಗಳನ್ನು ದುರ್ಬಲಗೊಳಸಿ, ದಾಖಲಾತಿ ಕಡಿಮೆಯಾಗುವಂತೆ ಮಾಡಿ ಈಗ ಕಡಿಮೆ ಮಕ್ಕಳಿದ್ದಾರೆಂದು ಆ ಶಾಲೆಯನ್ನು ಮುಚ್ಚಲು ಮುಂದಾಗಿದೆ. ಶಿಕ್ಷಣಕ್ಕಾಗಿ ಪೋಷಕರು ವಾಹನ ವ್ಯವಸ್ಥೆ ಮಾಡಿಕೊಂಡು ಬೇರೊಂದು ಶಾಲೆಗೆ ಮಕ್ಕಳನ್ನು ಕಳಿಸುವ ಒತ್ತಾಯಕ್ಕೊಳಪಡಿಸಲಾಗುತ್ತಿದೆ. ಸರ್ಕಾರದ ಈ ಹುನ್ನಾರಕ್ಕೆ ನಮ್ಮೂರ ಶಾಲೆಗಳು ಬಲಿಯಾಗಲು ನಾವು ಬಿಡಬಾರದು. ಶಾಲೆಯ ಉಳಿವಿಗಾಗಿ ನಾವು ಹೋರಾಟ ಬೆಳಸಬೇಕು” ಎಂದರು.
ಮತ್ತೋರ್ವ ಅತಿಥಿಗಳಾದ ನಿವೃತ್ತ ಪ್ರಾಚಾರ್ಯರು ಹಾಗೂ ಆರ್ಥಿಕತಜ್ಞರಾದ ಜಿ. ಎನ್. ಮಲ್ಲಿಕಾರ್ಜುನಪ್ಪ ಸರ್ಕಾರದ ನಡೆಯನ್ನು ವಿರೋಧಿಸಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರು ಪ್ರತಿ ಗ್ರಾಮಕ್ಕೂ ಒಂದು ಶಾಲೆ, ಒಂದು ಗ್ರಂಥಾಲಯ, ಒಂದು ಗರಡಿ ಮನೆ ಇರಬೇಕು. ಆಗ ಪ್ರತಿಯೊಬ್ಬನೂ ಶಿಕ್ಷಿತನೂ, ಜ್ಞಾನಿಯೂ, ಸದೃಢನೂ ಆಗಿ ಬೆಳೆಯುತ್ತಾನೆ. ದೇಶ ಪ್ರಗತಿ ಸಾಧ್ಯ ಎಂದಿದ್ದರು. ಆದರೆ ಸರ್ಕಾರ ಅಂತಹ ಮೂಲಭೂತ ಅವಶ್ಯಕತೆಯಾದ ಶಾಲೆಯನ್ನೇ ಮುಚ್ಚಲು ಹೊರಟಿದೆ. ಹೀಗಾದರೆ ಶಿಕ್ಷಣಕ್ಕಾಗಿ ಪ್ರತಿ ಬಡ ರೈತನೂ, ಕೂಲಿ ಕಾರ್ಮಿಕನೂ ತನ್ನ ದುಡಿತದ ದೊಡ್ಡ ಪಾಲನ್ನು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಆರ್ಥಿಕ ಅಸಮಾನತೆ ಇನ್ನೂ ಹೆಚ್ಚುತ್ತದೆ. ಅಸಮಾನತೆಯನ್ನು ಹೆಚ್ಚಿಸುವ, ಉದ್ಯೋಗಗಳನ್ನು ನಾಶ ಪಡಿಸುವ ಇಂತಹ ಕೆಪಿಎಸ್ ಯೋಜನೆಯನ್ನು ಹೋರಾಟದ ಮೂಲಕ ಹಿಮ್ಮೆಟ್ಟಿಸಬೇಕು” ಎಂದರು.
ಎಐಡಿಎಸ್‌ಒನ ರಾಜ್ಯ ಕಚೇರಿ ಕಾರ್ಯದರ್ಶಿಗಳಾದ ಮಹಾಂತೇಶ ಬಿಳೂರ್, ಚಿತ್ರದುರ್ಗದ ನೂರಾರು ಹಳ್ಳಿಗಳಲ್ಲಿ ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಾಗಿದೆ, ಅಂತಹ ಅನೇಕ ಹಳ್ಳಿಗಳಿಗೆ ನಾವು ಭೇಟಿ ನೀಡಿ ಪೋಷಕರಲ್ಲಿ ಅರಿವು ಮೂಡಿಸಿ, ಆ ಎಲ್ಲಾ ಹಳ್ಳಿಗಳಲ್ಲಿಯೂ ಶಾಲೆಯನ್ನು ಉಳಿಸುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಲಾಗಿದೆ. ಇಂದಿನ ಸಮಾವೇಶದಲ್ಲಿ ಜಿಲ್ಲಾ ಮಟ್ಟದ ಶಿಕ್ಷಣ ಉಳಿಸಿ ಸಮಿತಿಯು ರಚನೆಯಾಗಿದೆ. ಈ ಸಮಿತಿಯ ಮೂಲಕ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಸಂಚರಿಸಿ ಯಾವೊಂದು ಶಾಲೆಯೂ ಮುಚ್ಚದಂತೆ ಹೋರಾಟವನ್ನು ಮುಂದುವರೆಸಲಾಗುವುದು” ಎಂದರು. ಎಐಡಿವೈಓನ ರಾಜ್ಯ ಉಪಾಧ್ಯಕ್ಷರಾದ ಜಯಣ್ಣ, ಎಐಯುಟಿಯುಸಿಯ ಜಿಲ್ಲಾ ಕಾರ್ಮಿಕ ಮುಖಂಡರಾದ ಹೆಚ್ ರವಿಕುಮಾರ್, ಹಾಗೂ ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ಸಹ ಸಂಚಾಲಕರಾದ ಕುಮುದ ಅವರು ಹೋರಾಟವನ್ನು ಬೆಂಬಲಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಈರಣ್ಣ ವಹಿಸಿದ್ದರು.
ಜಿಲ್ಲೆಯ ಸಿಂಗಾಪುರ, ಕಳ್ಳಿಹಟ್ಟಿ , ಮಲ್ಲಾಪುರ ಗೊಲ್ಲರಹಟ್ಟಿ, ಪಾಂಡರಹಳ್ಳಿ, ಗೋನೂರು, ಮುತ್ತಯ್ಯನಹಟ್ಟಿ, ಚಿಕ್ಕಪ್ಪನಳ್ಳಿ ಹಾಗೂ ಇನ್ನಿತರ ಹಳ್ಳಿಗಳ ವಿದ್ಯಾರ್ಥಿಗಳು ಪೋಷಕರು ಹಾಗೂ ಗ್ರಾಮಸ್ಥರು ಸಮಾವೇಶದಲ್ಲಿ ಭಾಗವಹಿಸಿದ್ದರು. ನಗರದ ಶಿಕ್ಷಣತಜ್ಞರು, ವಿವಿಧಸಂಘಟನೆಗಳ ನಾಯಕರು ಸೇರಿದಂತೆ ಅನೇಕರು ಸಮಾವೇಶದಲ್ಲಿ ಉಪಸ್ಥಿತರಿದ್ದರು.







