ಚಿತ್ರದುರ್ಗ, (ಜನವರಿ.21) : ಟೆಕ್ಸ್ ಟೈಲ್ ಮತ್ತು ಜವಳಿ ಉದ್ಯಮಕ್ಕೆ ಹೊಸ ರೂಪವನ್ನು ಕೊಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಬ ಪಾಟೀಲ ಮುನ್ನೇನಕೊಪ್ಪ ಹೇಳಿದರು.
ಹಿರಿಯೂರಿನ ಬೈನರಿ ಅಪೆರಲ್ ಪಾರ್ಕ್ ಪ್ರೈ ಲಿಮಿಟೆಡ್‍ಅನ್ನು ಶುಕ್ರವಾರ ವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು.
ಟೆಕ್ಸ್ ಟೈಲ್, ಜವಳಿ ಉದ್ಯಮಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಇಲಾಖೆ ಆಯುಕ್ತರು ಈಗಾಗಲೇ ರಾಜ್ಯದ ವಿವಿಧೆಡೆ ಪ್ರವಾಸ ಮಾಡಲಾಗಿದೆ. ರಾಜ್ಯದ ಇನ್ನೂ ಅನೇಕ ಜಿಲ್ಲೆಗಳಿಗೆ ಭೇಟಿ ನೀಡಿ ಮುಂಬರುವ ರಾಜ್ಯದ ಬಜೆಟ್‍ನಲ್ಲಿ ವಿಶೇಷ ಒತ್ತು ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಹೊಸ ಜವಳಿ ನೀತಿ ಮತ್ತು ಸಿದ್ಧ ಉಡುಪಿನಲ್ಲಿ ಅನೇಕ ಹೊಸ ಯೋಜನೆಗಳನ್ನು ರೂಪಿಸುವ ಕಾರ್ಯ ಮಾಡಲಾಗಿದೆ. ಈಗಾಗಲೇ ಉದ್ಯೋಗ ಸೃಷ್ಠಿ ಮಾಡುವುದು ಹಾಗೂ ಉದ್ಯೋಗ ಸೃಷ್ಠಿಯಾಗಿ ಆರ್ಥಿಕವಾಗಿ ಜನರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೈಮಗ್ಗ ನೇಕಾರರು, ಪವರ್ ಲೂಮ್ ಜೊತೆಗೆ ಟೆಕ್ಸ್‍ಟೈಲ್‍ಗೂ ಭೇಟಿ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಉಡುಪಿ, ರಾಯಚೂರು, ಬೆಳಗಾವಿ ಹಾಗೂ ಚಿತ್ರದುರ್ಗ ಜಿಲ್ಲೆಗೂ ಭೇಟಿ ನೀಡಲಾಗಿದೆ ಎಂದರು.
ಜೀವನೋಪಾಯಕ್ಕೆ ಟೆಕ್ಸ್‍ಟೈಲ್‍ನಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಟೆಕ್ಸ್‍ಟೈಲ್‍ನಲ್ಲಿ ಕಾರ್ಯನಿರ್ವಹಿಸುವ ಅನೇಕ ಕಾರ್ಮಿಕರ ಹಿತರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಹಿತರಕ್ಷಣೆಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ರೂ.122 ಕೋಟಿ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ರೀತಿಯಂತೆ ನೇಕಾರ ಸಮ್ಮಾನ್ ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ನೇಕಾರರ ಸಮಸ್ಯೆ ತಿಳಿದುಕೊಂಡು ಇತಿಹಾಸದಲ್ಲಿ ಹೊಸ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಸುವರ್ಣ ಸೌಧದ ಅಧಿವೇಶನದಲ್ಲಿ ಕೊಟ್ಟಂತಹ ನೇಕಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವರಾಜ್ ಕುಲಕರ್ಣಿ ಇದ್ದರು.