ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ತಂದೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕೊರಿಯನ್ ಸೀರೀಸ್ಗಳನ್ನು ನೋಡುವುದನ್ನು ಬಿಡುವಂತೆ ಪೋಷಕರು ಒತ್ತಡ ಹೇರಿದ್ದರಿಂದ ಮಕ್ಕಳು ಖಿನ್ನತೆಗೆ ಒಳಗಾಗಿದ್ದರು ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ.
ನನ್ನ ಮಕ್ಕಳು ಕೊರಿಯನ್ ಸೀರೀಸ್ ಮತ್ತು ಗೇಮ್ಗಳಿಗೆ ಬಲಿಯಾಗಿದ್ದರು. ನಂತರ ಕೊರಿಯನ್ನರಂತೆಯೇ ಬದುಕಲು ಬಯಸಿದ್ದರು. ಆದರೆ ನಾನು ಅವರನ್ನು ಭಾರತೀಯರಾಗಿ ಬೆಳೆಸಲು ಪ್ರಯತ್ನಿಸಿದೆ. ಎಂದು ತಂದೆ ಹೇಳಿದ್ದಾರೆ. ಮಕ್ಕಳ ಸಾವು ಆತ್ಮಹತ್ಯೆಯಲ್ಲ, ಇದು ಆನ್ಲೈನ್ ಗೇಮ್ನ ಟಾಸ್ಕ್ ಎಂದು ತಂದೆ ಪೊಲೀಸರ ಬಳಿ ಹೇಳಿದ್ದಾರೆ.
ಆದರೆ, ಮಕ್ಕಳು ಆಡುತ್ತಿದ್ದ ಯಾವುದಾದರೂ ಗೇಮ್ನ ಟಾಸ್ಕ್ ನಿಂದಾಗಿ ಈ ಆತ್ಮಹತ್ಯೆ ನಡೆದಿದೆಯೇ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮಕ್ಕಳ ತಂದೆಗೆ ಎರಡು ಕೋಟಿ ರೂಪಾಯಿ ಸಾಲವಿತ್ತು. ತಂದೆ ತಮ್ಮ ಮೊಬೈಲ್ ಫೋನ್ ಮಾರಿದ್ದಕ್ಕೆ ಮೂವರಿಗೂ ಬೇಸರವಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮಕ್ಕಳು ಗೇಮ್ ಮಾತ್ರವಲ್ಲ, ನಿರಂತರವಾಗಿ ಕೊರಿಯನ್ ವೆಬ್ ಸೀರೀಸ್ಗಳನ್ನು ಕೂಡ ನೋಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

