ಸುದ್ದಿಒನ್, ಚಿತ್ರದುರ್ಗ, ಜನವರಿ. 21 : ತಾಲ್ಲೂಕಿನ ಭೀಮಸಮುದ್ರದಲ್ಲಿಂದು ಗ್ರಾಮಸ್ಥರು ಗಣಿ ಲಾರಿಗಳ ಓಡಾಟ ಮಾಡದಂತೆ ಪ್ರತಿಭಟನೆ ನಡೆಸಿದರು.
ಗ್ರಾಮದ ಮಧ್ಯಭಾಗದಲ್ಲಿ ಲಾರಿಗಳನ್ನು ತಡೆದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 20 ದಿನಗಳಿಂದ ಲಾರಿ ಸಂಚಾರ ಸ್ಥಗಿತಗೊಂಡಿತ್ತು. ಇಷ್ಟು ದಿನ ಸಾರ್ವಜನಿಕರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ದಿಢೀರ್ ಆಗಿ ರಾತ್ರೋರಾತ್ರಿ ಸುಮಾರು 2.00 ವೇಳೆಗೆ (ಸೋಮವಾರ ರಾತ್ರಿ) 150 ಲಾರಿಗಳು ಗ್ರಾಮದ ಒಳಗಡೆ ಪ್ರವೇಶ ಮಾಡಲು ಸಜ್ಜಾಗಿದ್ದವು. ಆದರೆ ಗ್ರಾಮಸ್ಥರ ವಿರೋಧದ ನಡುವೆಯೇ ಈ ಲಾರಿಗಳನ್ನು ಗ್ರಾಮದ ಒಳಗಡೆ ಸಂಚರಿಸಲು ಜಿಲ್ಲಾಧಿಕಾರಿಗಳ ಆದೇಶವಾಗಿತ್ತು ಎಂದು ಲಾರಿ ಟ್ರಾನ್ಸ್ಪೋರ್ಟ್ ಸಿಬ್ಬಂದಿಯವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಆದರೂ ಕೂಡ ಲಾರಿಗಳ ಓಡಾಟವನ್ನು ನಡೆಸುತ್ತೇವೆಂದು ಇರೋದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಾರಿ ರಾತ್ರಿ ಬಂದಿದ್ದವು ಎಂದು ತಿಳಿದುಬಂದಿದೆ.
ಭೀಮಸಮುದ್ರ ಗ್ರಾಮದ ರೈತ ಸಂಘದ ಅಧ್ಯಕ್ಷರಾದ ಶಂಕ್ರಮೂರ್ತಿ ಮಾತನಾಡಿ, 20 ದಿನಗಳ ಕಾಲ ಗ್ರಾಮದಲ್ಲಿ ಲಾರಿ ಸಂಚರಿಸಲು ಗ್ರಾಮಸ್ಥರು ಹಾಗೂ ನಾವುಗಳು ಬಿಟ್ಟಿರಲಿಲ್ಲ. ಆದರೆ ರಾತ್ರಿ ಇಡೀ ಲಾರಿಗಳನ್ನು ಕಾಯುವ ಪರಿಸ್ಥಿತಿ ಬಂದಿದೆ. ನಾವು ಕೇಳುತ್ತಿರುವುದು ಒಂದೇ ಗ್ರಾಮದ ಒಳಗಡೆ ಗಣಿ ಲಾರಿಗಳ ಸಂಚಾರ ಬೇಡ. ಪರ್ಯಾಯಮಾರ್ಗವನ್ನು ರೂಪಿಸಿಕೊಳ್ಳಲು ತಿಳಿಸುತ್ತಿದ್ದೇವೆ. ಗಣಿಗಾರಿಕೆ ಮಾಡಲು ನಾವು ಅವರನ್ನು ತೊಂದರೆ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೂ ಆದಾಯ ನಷ್ಟವಾಗುತ್ತದೆ ಎಂಬುದು ನಮಗೂ ಗೊತ್ತಿದೆ. ಆದ್ದರಿಂದ
ರೈಲು ಗೋಗಿಗಳ ಮುಖಾಂತರ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಗ್ರಾಮದ ರೈತ ಮುಖಂಡರಾದ ವೀರೇಶ್ ಮಾತನಾಡಿ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಗಳನ್ನು ಗ್ರಾಮಸ್ಥರನ್ನು ಹಾಗೂ ರೈತ ಮುಖಂಡರನ್ನು ಕರೆಸಿ ಲಾರಿಗಳನ್ನು ಓಡಾಡಲು ಬೇರೆ ವ್ಯವಸ್ಥೆ ಮಾಡಿಕೊಡುತ್ತೇವೆ. ಇಲ್ಲವಾದರೆ ತಮಗೇನಾದರೂ ಗೊತ್ತಿದ್ದರೆ ಬೇರೆ ಮಾರ್ಗವನ್ನು ತಿಳಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು. ಆದರೆ ದಿಢೀರ್ ರಾತ್ರಿ 150 ಲಾರಿಗಳು ಬಂದಿರುವುದನ್ನು ಕಂಡು ಗಾಬರಿಯಾಗಿದ್ದೇವೆ.
ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಲಾರಿಗಳು ಓಡಾಡುತ್ತವೆ. ಆದರೆ ಇತ್ತೀಚಿಗೆ ಆರೋಗ್ಯದ ಸಮಸ್ಯೆ ಕಾರಣದಿಂದ ನಾವು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ದಿನನಿತ್ಯ ಕಣ್ಣಿನಲ್ಲಿ ಧೂಳಿನ ಅಂಶ ಕಂಡುಬಂದಿದ್ದು ಸುಮಾರು ಒಂದು ವರ್ಷಗಳಿಂದ ನಾನು ಆಸ್ಪತ್ರೆಗೆ ಓಡಾಡುತ್ತಿದ್ದೇನೆ.
ರಸ್ತೆ ಮೇಲೆ ಬಿದ್ದ ಧೂಳು ಮನೆಗಳಲ್ಲಿ ಆಹಾರ ಪದಾರ್ಥದಲ್ಲೂ ಧೂಳು ಕಂಡುಬರುತ್ತದೆ. ಊಟ ಮಾಡಲು ಸಮಸ್ಯೆಯಾಗುತ್ತಿದೆ. ಆದರೆ ಸರ್ಕಾರ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮದಲ್ಲಿರುವ ಅನೇಕ ಜನರಿಗೆ ತೊಂದರೆಯಾಗುತ್ತಿದೆ ಇದನ್ನು ಕೂಡಲೇ ಗಮನಹರಿಸಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.






