ನಮ್ಮ ಊರು ನಮ್ಮ ಹೆಮ್ಮೆ : ನಿಡುಗಲ್ ಬೆಟ್ಟದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ

2 Min Read

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್ : ತುಮಕೂರು ಜಿಲ್ಲೆಯ ಪಾವಗಡ ತಾಲೂಕು ನಿಡುಗಲ್ ಹೋಬಳಿಯ ನಿಡುಗಲ್ ಬೆಟ್ಟವು ಧಾರ್ಮಿಕವಾಗಿ ಐತಿಹಾಸಿಕವಾಗಿ ಗುರುತಿಸಲ್ಪಡುವ ಒಂದು ಪ್ರಮುಖ ಸ್ಥಳವಾಗಿದೆ.

ಪಾವಗಡ ತಾಲೂಕು ಸಂಪೂರ್ಣವಾಗಿ ಬೆಟ್ಟಗಳ ಸ್ಥಳವಾಗಿದೆ. ಬಿರುಬಿಸಿಲು ಒಣ ಪ್ರದೇಶವೇ ಇಲ್ಲಿ ಕಂಡುಬರುತ್ತದೆ. ತಾಲೂಕಿನ ಪಶ್ಚಿಮ ದಿಕ್ಕಿಗೆ ಕಂಡು ಬರುವ ನಿಡುಗಲ್ ಬೆಟ್ಟವು ಪಾವಗಡದಿಂದ 28 ಕಿಲೋಮೀಟರ್ ದೂರವಿದೆ.

ಆಡಳಿತಾತ್ಮಕವಾಗಿ ತುಮಕೂರು ಜಿಲ್ಲೆಗೆ ಸೇರಿದ್ದರೂ ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಯೊಂದಿಗೆ ಬೆಸೆದುಕೊಂಡಿದೆ.
ಸುತ್ತಲೂ ಮನಮೋಹಕ ಪ್ರಕೃತಿ,ಎತ್ತರವಾದ ಗಿರಿ ಶಿಖರಗಳ ವಿಹಂಗಮ ನೋಟವೇ ಇಲ್ಲಿ ಕಂಡುಬರುತ್ತದೆ. ಅದರಲ್ಲೂ ಮಳೆಗಾಲದ ನಂತರ ಇಡೀ ಪ್ರದೇಶವು ಹಸಿರಿನಿಂದ ಕಂಗೊಳಿಸಿ ಮಲೆನಾಡಿನ ಒಂದು ಸ್ಥಳದಂತೆ ಕಂಡುಬರುತ್ತದೆ.
ಹಿಂದೆ ರಾಜ ಮಹಾರಾಜ ಪಾಳೆಗಾರರಿಂದ ಅಳಲ್ಪಟ್ಟ ನಿಡುಗಲ್ ದುರ್ಗದ ಇತಿಹಾಸ ಹೇಳಲು ಒಂದು ಇಡೀ ದಿನವೂ ಸಾಲುವುದಿಲ್ಲ.
ಚಾಲುಕ್ಯರು,ಪಲ್ಲವರು, ನೊಳಂಬರು, ಹೊಯ್ಸಳರು ಚೋಳರು, ವಿಜಯನಗರದ ಅರಸರು, ಪಾಳೇಗಾರರು, ಹೈದರಾಲಿ… ಮುಂತಾದವರು ಆಳ್ವಿಕೆ ಮೆರೆದ ಒಂದು ಪ್ರಮುಖ ಸ್ಥಳವಾಗಿದೆ.

ಈ ಸ್ಥಳವನ್ನು ನೀಲಾಂಜನಗಿರಿ, ಕಾಳಾಂಜನಗಿರಿ,ನೀಲಾವತಿ ಪಟ್ಟಣವೆಂದು ಕರೆಯಲಾಗುತ್ತಿತ್ತು. ವೀರಭದ್ರೇಶ್ವರ ಸ್ವಾಮಿ ದೇವಾಲಯವು ಈ ಭಾಗದ ಭಕ್ತರ ನೆಚ್ಚಿನ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯವು ನಿಡುಗಲ್ ಕೋಟೆಯ ವೀರಭದ್ರನ ಕೋಟೆಯೊಳಗೆ ಇದೆ. ದೇವಾಲಯವು ಉತ್ತರಾಭಿಮುಖವಾಗಿದ್ದು, ಗರ್ಭಗೃಹದಲ್ಲಿ ಇರುವ ವೀರಭದ್ರೇಶ್ವರ ಸ್ವಾಮಿ ಮೂರ್ತಿಯು ಅತ್ಯಂತ ಆಕರ್ಷಣೀಯವು ರಮಣೀಯವೂ ಆಗಿದೆ. ಈ ದೇವಾಲಯವು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಇತಿಹಾಸ ತಿಳಿಸುತ್ತದೆ. ದೇವಾಲಯವು ಪ್ರಮುಖವಾಗಿ ನವರಂಗ, ಅರ್ಧ ಮಂಟಪ,ಅಂತರಾಳ, ಗರ್ಭಗುಡಿಗಳನ್ನು ಹೊಂದಿದೆ. ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಪ್ರವೇಶ ದ್ವಾರಗಳಿವೆ. ವೀರಭದ್ರ ಸ್ವಾಮಿಯ ದ್ವಿಭುಜಧಾರಿಯಾಗಿದ್ದು ಬಲಗೈಯಲ್ಲಿ ಕತ್ತಿಯನ್ನು, ಎಡಗೈಯಲ್ಲಿ ಹಲಗೆಯನ್ನು ಹಿಡಿದಿದ್ದಾನೆ.
ಹಣೆಯ ಮೇಲ್ಭಾಗದಲ್ಲಿ ರುದ್ರಾಕ್ಷಿ ಹಾರವನ್ನು ತಲೆಯ ಸುತ್ತ ಕಟ್ಟಿರುವಂತೆ ಬಿಡಿಸಲಾಗಿದೆ. ಕಿವಿಗೆ ಕರ್ಣ ಕುಂಡಲ ತೊಡಿಸಲಾಗಿದೆ, ತಲೆಯ ಹಿಂಬದಿಯ ಮೇಲ್ಭಾಗದಲ್ಲಿ ಲಿಂಗಮುದ್ರೆ ಇದೆ. ನಿದ್ದೆ ಪೂಜೆ ಗೊಳ್ಳುತ್ತಿರುವ ಈ ದೇವರಿಗೆ ವಿವಿಧಡೆ ಲಕ್ಷಾಂತರ ಭಕ್ತರಿದ್ದಾರೆ.

 

ಮೂರ್ತಿಯನ್ನು ಸಾಮಾನ್ಯ ಜನರು ವೀರಣ್ಣ, ವೀರೇಶ್ವರ,ವೀರಭದ್ರ ಎಂದು ಕರೆಯುತ್ತಾರೆ ಹಾಗೂ ತಮ್ಮ ಮನೆಯಲ್ಲಿ ಒಬ್ಬರಿಗಾದರೂ ಈ ದೇವರ ಹೆಸರನ್ನು ಇಡುವ ರೂಢಿ ಇದೆ.
ದೇವಾಲಯದ ಉತ್ತರದ ಪ್ರವೇಶ ದ್ವಾರದ ಎದುರಿಗೆ 15 ಅಡಿ ಎತ್ತರದ ದೀಪ ಸ್ತಂಭವನ್ನು ನಿರ್ಮಿಸಲಾಗಿದೆ. ಕಾರ್ತಿಕ ಮಾಸದಲ್ಲಿ ಅದರ ಮೇಲ್ಭಾಗದಲ್ಲಿ ಮಣ್ಣಿನ ದೀಪವನ್ನು ಇಟ್ಟು ದೀಪವನ್ನು ಬೆಳಗುವರು.

 

ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ.ಆದರೆ ಭಕ್ತರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ ಪ್ರತಿಯೊಬ್ಬರೂ ಖಾಸಗಿ ವಾಹನಗಳಲ್ಲಿಯೇ ಇಲ್ಲಿಗೆ ಬರಬೇಕಾಗುತ್ತದೆ.

 

ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅತಿ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.ಅಂದು ಸ್ವಾಮಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ, ದಾಸೋಹ, ಮಹಾಮಂಗಳಾರತಿ.. ನಡೆಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಕೆಂಡ ಆಚರಣೆ ಜರುಗುತ್ತದೆ.
ಕಳೆದ ದಶಕದಲ್ಲಿ ದೇವಾಲಯವನ್ನು ಭಕ್ತರ ನೆರವಿನಿಂದ ಜೀರ್ಣೋದ್ಧಾರ ಗೊಳಿಸಲಾಗಿದೆ.
ಚಿತ್ರದುರ್ಗ,ಚಳ್ಳಕೆರೆ, ಪಾವಗಡದಿಂದ ಇಲ್ಲಿಗೆ ಬೆಳ್ಳಿಬೆಟ್ಟು, ಲಿಂಗದಹಳ್ಳಿ, ದೊಡ್ಡೇನಹಳ್ಳಿ ..ಗ್ರಾಮದಿಂದ ಒಳಭಾಗಕ್ಕೆ ದಕ್ಷಿಣಕ್ಕೆ ಬಂದರೆ ನೇರವಾಗಿ ನಿಡುಗಲ್ ಬೆಟ್ಟಕ್ಕೆ ತಲುಪುತ್ತದೆ.

Share This Article