ಬಳ್ಳಾರಿ: ಬಿಜೆಪಿ – ಕಾಂಗ್ರೆಸ್ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾನೆ. ತಮ್ಮನಿಲ್ಲದ ಪರಿಸ್ಥಿತಿ ಬಗ್ಗೆ ಅಕ್ಕ ಕಣ್ಣೀರು ಹಾಕಿದ್ದಾರೆ. ನಮ್ಮ ಅಪ್ಪ ತೀರಿಕೊಂಡಿದ್ದಾರೆ, ಇತ್ತ ನಮ್ಮ ಗಂಡನು ಇಲ್ಲ. ನಮ್ಮ ಇಬ್ಬರು ತಮ್ಮಂದಿರು ಇದ್ದರು ಎಂಬ ಧೈರ್ಯ ಇತ್ತು ನಮಗೆ. ದೊಡ್ಡ ತಮ್ಮನೆ ನಮಗೆಲ್ಲಾ ದಿಕ್ಕಾಗಿದ್ದ ಎಂದು ಕಣ್ಣೀರಿಟ್ಟಿದ್ದಾರೆ.
ಅವನು ಸತ್ತ ಮೇಲೆ ಆಧಾರವೇ ಇಲ್ಲದಂತೆ ಆಗಿದೆ. ದುಡಿಯೋರೆ ಇಲ್ಲದಂತೆ ಆಗಿದೆ. ಏನು ಮಾಡೋದು ಈಗ. ಗಂಡನನ್ನ ಕಳೆದುಕೊಂಡು ಸಹ ತಮ್ಮಂದಿರಿದ್ದಾರೆ ಅನ್ನೋ ಧೈರ್ಯ ಇತ್ತು. ನಂಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮದು ಬಡ ಕುಟುಂಬ. ಆಸ್ತಿ ಪಾಸ್ತಿ ಅಂತ ಏನಿಲ್ಲ. ಕೂಡಿಟ್ಕೊಂಡು ಬದುಕ್ತಾ ಇದ್ದೆವು. ನಮ್ಮ ಅತ್ತೆ ಮನೆಗೆ ಇದ್ದೆ. ರಾತ್ರಿ ಹೀಗಾಗಿದೆ ಅಂತ ಗೊತ್ತಾದ ಮೇಲೆ ಬರುವುದಕ್ಕೂ ನಮಗೆ ಗಂಡು ಮಕ್ಕಳ ದಿಕ್ಕು ಇರಲಿಲ್ಲ. ಬೆಳಗ್ಗೆದ್ದು ಬಸ್ ಗೆ ಬಂದೆವು.
ರಾಜಶೇಖರ್ ಶಬರಿಮಲೆ ಮಾಲೆ ಹಾಕಿದ್ರು. ಸೋಮವಾರ ಬಂದಿದ್ದ, ನಾನು ಮಂಗಳವಾರ ಫೋನ್ ಮಾಡಿದ್ದೆ. ಊರಿಂದ ಬಂದೇನಪ್ಪ ಅಂತ ಕೇಳಿದ್ದೆ. ಹು ಅಕ್ಕ ಬಂದು ಪ್ರಸಾದ ತಗೊಂಡ್ ಹೋಗು ಅಕ್ಕ ಅಂತ ಕರೆದಿದ್ದ. ಈಗ ಬರೋದಿಕ್ಕ ಆಗಲ್ಲ ಅಪ್ಪ ಅಂತ ಹೇಳಿದ್ದೆ. ನಿನಿಗ್ ನಾನಿದ್ದೀನಿ ಅಕ್ಕ ಅಂತ ಧೈರ್ಯ ಹೇಳ್ತಾ ಇದ್ದ. ನಿನ್ನ ಮಕ್ಕಳನ್ನ ನಾನೇ ನೋಡಿಕೊಳ್ಳುತ್ತೇನೆ ಎಂದಿದ್ದ. ಈಗ ಅವನೇ ಇಲ್ಲದಂತೆ ಆಗಿದೆ. ನಮ್ಮ ಪರಿಸ್ಥಿತಿ ಈಗ ಹೇಗೆ ಸರ್. ಭರತ್ ರೆಡ್ಡ ಸರ್,ವಿಕ್ಕಿ ಅಣ್ಣ ಬಂದು ನಿಮ್ಮ ಕೈ ಹಿಡಿತೀವಿ ಅಂತ ಹೇಳಿ ಹೋಗಿದ್ದಾರೆ ಎಂದಿದ್ದಾರೆ.






