ನಮ್ಮೂರು ನಮ್ಮ ಹೆಮ್ಮೆ : ಚಳ್ಳಕೆರೆ ; ಅಂತ್ಯ ಸುಬ್ರಹ್ಮಣ್ಯ ಕ್ಷೇತ್ರ ನಾಗಲಮಡಿಕೆ

4 Min Read

ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ನಾಗಾರಾಧನೆಯನ್ನು ಕರ್ನಾಟಕದ ಎಲ್ಲಾ ಕಡೆಯಲ್ಲಿ ಕೂಡ ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಕೃಷಿ ಕ್ಷೇತ್ರವನ್ನು ನಂಬಿ ಬದುಕುತ್ತಿದ್ದ ರೈತರು ನಾಗರವನ್ನು ದೈವ ಸ್ವರೂಪಿ ಎಂದು ನಂಬಿ ಪೂಜಿಸಿಕೊಂಡು ಇದೇ ನಾಗರಗಳಿಗೆ ನೂರಾರು ಕಡೆ ದೇವಸ್ಥಾನಗಳನ್ನು, ನಾಗಪ್ಪನ ಕಟ್ಟೆಗಳನ್ನು,ನಾಗಬನಗಳನ್ನು.. ನಿರ್ಮಿಸಿರುವುದನ್ನು ಕಾಣಬಹುದು.
ಇಂತಹದೇ ಒಂದು ಸುಪ್ರಸಿದ್ಧ ನಾಗ ಕ್ಷೇತ್ರ ತುಮಕೂರು ಜಿಲ್ಲೆ ಪಾವಗಡ ತಾಲೂಕು ನಾಗಲಮಡಿಕೆಯಲ್ಲಿದೆ.

ಪಾವಗಡದಿಂದ 17 ಕಿಲೋ ಮೀಟರ್, ತುಮಕೂರಿನಿಂದ 117 km ಚಿತ್ರದುರ್ಗದಿಂದ 125 ಕಿ.ಮೀ ದೂರದಲ್ಲಿರುವ ನಾಗಲಮಡಿಕೆ ಸುಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರವಾಗಿದೆ.

ಕರ್ನಾಟಕದಲ್ಲಿರುವ ಪ್ರಮುಖ ಮೂರು ಸುಬ್ರಹ್ಮಣ್ಯ ಕ್ಷೇತ್ರಗಳ ಪೈಕಿ ನಾಗಲಮಡಿಕೆಯ ಈ ದೇವಾಲಯವೂ ಒಂದು.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯವನ್ನು ಆದಿ ಸುಬ್ರಹ್ಮಣ್ಯ ಎಂದೂ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಹ್ಮಣ್ಯಕ್ಕೆ ಮಧ್ಯ ಸುಬ್ರಹ್ಮಣ್ಯ ಎಂದೂ, ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯ ಎಂದೂ ಕರೆದಿದ್ದಾರೆ.
ನಂದಿ ಬೆಟ್ಟಗಳಲ್ಲಿ ಹುಟ್ಟುವ ಉತ್ತರ ಪಿನಾಕಿನಿ ನದಿಯ ದಂಡೆಯಲ್ಲಿ ಈ ದೇವಾಲಯವಿದೆ. ಈ ನದಿಯು ಮುಂದೆ ಕೃಷ್ಣಾ ನದಿಗೆ ಸೇರುತ್ತದೆ.

ಐತಿಹ್ಯದಂತೆ ಹಿಂದೆ ಅಗ್ರಹಾರವಾಗಿದ್ದ ನಾಗಲಮಡಿಕೆಯಲ್ಲಿ ಅನ್ನಂಭಟ್ಟರೆಂಬ ಋತ್ವಿಕರು ವಾಸಿಸುತ್ತಿದ್ದರು. ಅವರ ಮನೆದೇವರು ಕುಕ್ಕೆ ಸುಬ್ರಹ್ಮಣ್ಯವಾಗಿದ್ದು, ಪ್ರತಿವರ್ಷ ಕುಕ್ಕೆ ರಥೋತ್ಸವಕ್ಕೆ ಹೋಗುತ್ತಿದ್ದರು. ಹಲವು ವರ್ಷಗಳ ಬಳಿಕ ವಯೋವೃದ್ಧರಾದ ಅನ್ನಂಭಟ್ಟರು ಕುಕ್ಕೆಗೆ ಹೊರಟರಾದರೂ, ರಥ ಎಳೆಯುವ ವೇಳೆಗೆ ಕುಕ್ಕೆ ತಲುಪಲು ಸಾಧ್ಯವಾಗದೆ ನೊಂದರು,
ಸುಬ್ರಹ್ಮಣ್ಯನಿಗೆ ನನ್ನ ಸೇವೆ ಬೇಡವಾಗಿತ್ತೆ ಎಂದು ಮರುಗಿದರು. ಭಕ್ತನ ಮೊರೆ ಕೇಳಿದ ಸುಬ್ರಹ್ಮಣ್ಯ ಇತ್ತ ಕುಕ್ಕೆಯಲ್ಲಿ ಎಷ್ಟೇ ರಥ ಎಳೆದರೂ ರಥ ಚಲಿಸದಂತೆ ಮಾಡಿದ. ವಟುರೂಪದಲ್ಲಿ ಕಾಣಿಸಿಕೊಂಡು, ಭಕ್ತಶ್ರೇಷ್ಠರೊಬ್ಬರು ಬರುತ್ತಿದ್ದಾರೆ. ಅವರು ಬಂದು ಹಗ್ಗ ಹಿಡಿಯುವ ತನಕ ರಥ ಚಲಿಸದು ಎಂದನಂತೆ.

ಅನ್ನಂಭಟ್ಟರು ಬಂದು ಹಗ್ಗ ಹಿಡಿಯುತ್ತಿದ್ದಂತೆ ರಥ ಚಲಿಸಿತು. ಆಗ ಅದೇ ವಟುರೂಪಿ ಸುಬ್ರಹ್ಮಣ್ಯ, ನಿಮಗೆ ವಯಸ್ಸಾಗಿದೆ.ಇನ್ನು ಮುಂದೆ ನೀವು ಇಲ್ಲಿಗೆ ಬರುವುದು ಬೇಡ, ನೀವಿರುವಲ್ಲಿಗೆ ನಾನೇ ಬರುತ್ತೇನೆ.ಅಲ್ಲೇ ರಥೋತ್ಸವ ಮಾಡಿ ಎಂದು ಅಪ್ಪಣೆ ಕೊಡಿಸಿದನಂತೆ. ಜೊತೆಗೆ ಕುಕ್ಕೆ ದೇವಾಲಯದಲ್ಲಿದ್ದ ನಾಗಾಭರಣವನ್ನು ಸಹ ಕೊಡಿಸಿದನಂತೆ. ಊರಿಗೆ ಬಂದ ಅನ್ನಂಭಟ್ಟರು ಉತ್ತರ ಪಿನಾಕಿನಿ ತೀರದಲ್ಲಿ ಉಳುಮೆ ಮಾಡಿಸುತ್ತಿದ್ದಾಗ ನೇಗಿಲು ಅಲ್ಲೇ ನಿಂತಿತಂತೆ. ಅಗೆದು ನೋಡಿದಾಗ ಅಲ್ಲಿ ನಾಗರ ಕಲ್ಲು ಸಿಕ್ಕಿತು. ಅನ್ನಂಭಟ್ಟರು ಆ ಕಲ್ಲನ್ನೇ ಸುಬ್ರಹ್ಮಣ್ಯ ಎಂದು ಪ್ರತಿಷ್ಠಾಪಿಸಿದರು. ತೆಲುಗಿನಲ್ಲಿ ಮಡಕ ಎಂದರೆ ನೇಗಿಲು, ನೇಗಿಲಿಗೆ ನಾಗರ ಕಲ್ಲು ಸಿಕ್ಕ ಕಾರಣ ಈ ಊರಿಗೆ ನಾಗಲಮಡಿಕೆ ಎಂಬ ಹೆಸರು ಬಂದಿದೆ.

 

ಅನ್ನಂಭಟ್ಟರು ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಿದ್ದ ಈ ದೇವಾಲಯಕ್ಕೆ ವರ್ತಕರಾದ ರೊದ್ದಂ ಬಾಲಸುಬ್ಬಯ್ಯ ಅವರು ದೇವಪ್ರೇರಣೆಯಿಂದ ಇಲ್ಲಿ ದೇವಸ್ಥಾನ ಕಟ್ಟಿಸಿದರೆಂದು ತಿಳಿದುಬರುತ್ತದೆ. ಇಂದಿಗೂ ನಾಗಲಮಡಿಕೆಯಲ್ಲಿ ರಥೋತ್ಸವ ಕಾಲದಲ್ಲಿ ಅನ್ನಂಭಟ್ಟರು ಕುಕ್ಕೆಯಿಂದ ತಂದ ನಾಗಾಭರಣ ಬಳಸಲಾಗುತ್ತದೆ. ರೊದ್ದಂ ಬಾಲಸುಬ್ಬಯ್ಯ ಅವರ ವಂಶಸ್ಥರು ಇಂದಿಗೂ ಅನ್ನಸಂತರ್ಪಣೆ ಮಾಡಿಸುತ್ತಾರೆ. ದೇವಾಲಯವು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿ ಅತ್ಯಂತ ಸುಂದರವಾದ ಮೂರು ಸುತ್ತು ಸುತ್ತಿ ನಿಂತ ಮೂರು ಅಡಿ ಎತ್ತರದ ಏಳು ಹೆಡೆ ನಾಗಪ್ಪನ ಮೂರ್ತಿಯಿದೆ. ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಅಂದರೆ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಾಗಲಮಡಿಕೆಯ ಸುಬ್ರಹ್ಮಣ್ಣೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.

ಬ್ರಹ್ಮ ರಥೋತ್ಸವ ವಿಶೇಷ…
ಪುಷ್ಯ ಮಾಸದ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಎತ್ತಿನ ಬಂಡಿಯಲ್ಲಿ ಬಂದು ನದಿ ತಟದಲ್ಲಿ ಅಡುಗೆ ತಯಾರಿಸಿ ಪೂಜೆ ನಂತರ ಒಂದು ಹೊತ್ತು ಬಿಡುವ ಪದ್ಧತಿ ಈ ಭಾಗದ ಜನರಲ್ಲಿದೆ. ಮಾರ್ಗಶಿರ, ಪುಷ್ಯ, ಮಾಘ ಮಾಸಗಳ ಷಷ್ಠಿಯಂದು ಆರಾಧನೆ, ವಿಶೇಷ ಪೂಜಾ ಮಹೋತ್ಸವ ನಡೆಸಲಾಗುತ್ತದೆ.

ಅನ್ನದ ರಾಶಿ ಮೇಲೆ ಪೂಜೆ :
ಮೂರು ಮಾಸಗಳ ಷಷ್ಠಿಯಂದು ಅನ್ನದ ರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ನಂತರ ಸುಬ್ರಹ್ಮಣ್ಯ ಸ್ವಾಮಿಯು ನಾಗರಹಾವು ರೂಪದಲ್ಲಿ ಬಂದು ಅನ್ನದ ರಾಶಿಯ ಮೇಲೆ ಹಾದು ಹೋಗುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಇದರ ಜೊತೆಗೆ ಜಾತ್ರಾ ಸಮಯದಲ್ಲಿ ಇಲ್ಲಿ ಜಿಲ್ಲೆಯಲ್ಲಿಯೇ ಭಾರಿ ದನಗಳ ಜಾತ್ರೆ ಜರುಗುತ್ತದೆ.ಆದರೆ ಆಧುನಿಕತೆಯ ಹಾಗೂ ಯಂತ್ರೋಪಕರಣಗಳ ಬಳಕೆಯಿಂದ ಇಂದು ದನಗಳ ಜಾತ್ರೆಯೂ ಕಳೆಗುಂದಿದೆ.

ಮಂಗಳವಾರ, ಭಾನುವಾರಗಳಂದು ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ.
ದೇಗುಲ ಪ್ರದೇಶದಲ್ಲಿ ಆಗಾಗ ನಿಜ ಸರ್ಪ ದರ್ಶನ ಕೊಡುತ್ತಿರುತ್ತದೆ.

ತೀಟೆ ನಾಗಪ್ಪ ದೇವಾಲಯ:
ನಾಗಲಮಡಿಕೆಯಿಂದ ದಕ್ಷಿಣಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿ ಎತ್ತರದ ಕಲ್ಲುಬಂಡೆಯ ಮೇಲೆ ಏಳು ಹೆಡೆಯ ನಾಗರನಂತೆಯೇ ಇರುವ ಬಂಡೆಯೊಂದಿದೆ. ಇದನ್ನು ಉದ್ಭವ ನಾಗ ಎಂದೂ ತೀಟೆ ನಾಗಪ್ಪ ಎಂದೂ ಕರೆಯುತ್ತಾರೆ. ತೀಟೆ ಎಂದರೆ ಚರ್ಮವ್ಯಾಧಿ ಎಂದರ್ಥ. ಚರ್ಮರೋಗಿಗಳು ಪೂಜೆ ಸಲ್ಲಿಸಿದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

ಪ್ರತಿ ನಿತ್ಯ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ಮಕ್ಕಳಾಗದವರು ಇಲ್ಲಿ ಬಂದು ಹರಕೆ ಹೊರುತ್ತಾರೆ. ದೋಷ ನಿವಾರಣೆಗಾಗಿ ನಾಗರಕಲ್ಲು ಪ್ರತಿಷ್ಠಾಪನೆ, ಸರ್ಪ ಸಂಸ್ಕಾರ ಇತ್ಯಾದಿ ದೋಷ ಪರಿಹಾರ ಪೂಜೆ ಮಾಡಿಸುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ವಿವಾಹ ಮಹೋತ್ಸವಗಳು ಕೂಡ ನಡೆಯುತ್ತವೆ.

ಚಿತ್ರದುರ್ಗ ಹಾಗೂ ತುಮಕೂರಿನಿಂದ ಪಾವಗಡಕ್ಕೆ ದಿನಪೂರ್ತಿ ಖಾಸಗಿ ಹಾಗೂ ಸರ್ಕಾರಿ ಬಸ್ ಸೇವೆ ಲಭ್ಯವಿದೆ. ಪಾವಗಡದಿಂದ ತಿರುಮಣಿಗೆ ಹೋಗುವ ಎಲ್ಲಾ ಬಸ್ಸುಗಳು ನಾಗಲಮಡಿಕೆಯಲ್ಲಿ ನಿಲ್ಲುತ್ತವೆ. ಬಂದ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ.

Share This Article