ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 27 : ತಾಲ್ಲೂಕಿನ ಸೀಬಾರದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ವತಿಯಿಂದ ಕೊಡುವ ವಿಶ್ವ ಮಾನವ ಪ್ರಶಸ್ತಿಗೆ ಚಿತ್ರಕಲಾ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿರುವ ಜಿಲ್ಲೆಯ ಹೆಸರಾಂತ ಚಿತ್ರ ಕಲಾವಿದ ಟಿ.ಎಂ.ವೀರೇಶ್ ಅವರು ಭಾಜನರಾಗಿದ್ದಾರೆ.
ಸೀಬಾರದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ನಾಳೆ (ಡಿಸೆಂಬರ್. 29 ರ, ಸೋಮವಾರ) ಸಂಜೆ ಸೀಬಾರಾದ ಶಾಲಾ ಆವರಣದಲ್ಲಿ ನಡೆಯಲಿರುವ ಕುವೆಂಪು ಜನ್ಮ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಟಿ.ಎಂ.ವೀರೇಶ್ ಅವರಿಗೆ ಪ್ರಶಸ್ತಿ ಯನ್ನು ಕೊಟ್ಟು ಗೌರವಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಹೆಸರಾಂತ ಉಪನ್ಯಾಸಕರು ಹಾಗೂ ಸಾಹಿತಿಗಳೂ ಆದ ನಿಸ್ಸಾರ್ ಅಹಮದ್ ಅವರು ಕುವೆಂಪು ಕುರಿತು ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಟಿ.ಎಂ.ವೀರೇಶ್ ರವರ ಚಿತ್ರಕಲಾ ಪ್ರದರ್ಶನವೂ ಏರ್ಪಾಡಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬುಡೆನ್ ಸಾಬ್ ವಹಿಸಲಿದ್ದು, ಪ. ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸುವರು.
ಕಾರ್ಯದರ್ಶಿ ನೀಲಕಂಠ ದೇವರು ಪ್ರಾಸ್ತಾವಿಕವಾಗಿ ಮಾತನಾಡುವರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ, ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಖಜಾಂಚಿ ನಾಗಲಿಂಗರೆಡ್ಡಿ, ಡಾ.ಈ.ರುದ್ರಮುನಿ ಭಾಗವಹಿಸಲಿದ್ದಾರೆ. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗಿವೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಶ್ರೀ ಎಚ್.ಎಸ್. ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












