ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 26 : ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿ ಗ್ರಾಮದ ಶಕ್ತಿ ದೇವತೆಯಾದ ಶ್ರೀ ಶ್ರೀ ಶ್ರೀ ಗೌರಸಮುದ್ರದೇವಿಯ ಸನ್ನಿಧಿಯಲ್ಲಿ ದೇವಿಯ 14 ನೇ ವರ್ಷದ ಕಾರ್ತಿಕ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಕಾರ್ತಿಕ ಮಹೋತ್ಸವದ ಅಂಗವಾಗಿ ದೇವಿಗೆ
ಮಹಾಪಂಚಾಮೃತಾಭಿಶೇಕ, ಮಹಾಮಂಗಳರಾತಿ,
ಗಂಗೆ ಪೂಜೆ, ತದನಂತರ ಗ್ರಾಮದ ದೇವಸ್ಥಾನಗಳಿಗೆ ಕುಂಭಮೇಳದೊಂದಿಗೆ ಹರಿಶಿಣ, ಕುಂಕುಮ, ಅಕ್ಷತೆ ಸಮರ್ಪಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಸಂಜೆ ನಡೆದ ಅದ್ದೂರಿ ದೀಪೋತ್ಸವದಲ್ಲಿ ಭಕ್ತರು ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.
ಬಸವೇಶ್ವರ ನಗರ, ಬಾಪೂಜಿ ನಗರ, ವಿದ್ಯಾನಗರ, ಜೆಸಿಆರ್ ಬಡಾವಣೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾದರು. ಸಂಜೆ 7 ಗಂಟೆಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ವರ್ಷದಿಂದ ವರ್ಷಕ್ಕೆ ಸುತ್ತಮುತ್ತಲಿನ ಬಡಾವಣೆಗಳ, ಗ್ರಾಮಗಳ ಭಕ್ತರು ನೀಡುವ ದೇಣಿಗೆಯಿಂದ ಕಾರ್ತಿಕ ಮಹೋತ್ಸವ, ವಿಶೇಷ ಪೂಜೆ ಹಾಗೂ ದಾಸೋಹ ನಡೆಸುವುದು ವಿಶೇಷ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚು ಮೆರುಗು ಪಡೆದುಕೊಳ್ಳುತ್ತಿರುವುದು ಗಮನಾರ್ಹ.






