ಧಾರವಾಡ: ಇಡೀ ಹುಬ್ಬಳ್ಳಿ ಧಾರವಾಡವನ್ನೇ ನಡುಗಿಸುವಂತಹ ಘಟನೆ ನಡೆದಿದೆ. ತಂದೆಯೇ ಮುದ್ದು ಮಗಳನ್ನ ಬರ್ಬರವಾಗಿ ಕೊಂದಿದ್ದಾನೆ. ಅದರಲ್ಲೂ ಆ ಮೃತ ಮಗಳೆಂದರೆ ತಂದೆಗೆ ಇನ್ನಿಲ್ಲದ ಪ್ರೀತಿ. ಮಗಳನ್ನ ಚೆನ್ನಾಗಿ ಓದಿಸಿ, ಇಂಜಿನಿಯರ್ ಮಾಡಬೇಕು ಎಂಬ ಆಸೆ. ಆದರೆ ಅನ್ಯ ಜಾತಿ ಹುಡುಗನನ್ನ ಮದುವೆಯಾಗಿದ್ದಾಳೆಂಬ ಒಂದೇ ಒಂದು ಕಾರಣಕ್ಕೆ ತಂದೆಯೇ ಮುದ್ದಿನ ಮಗಳು ಎಂಬ ಫೀಲಿಂಗ್ಸ್ ಅನ್ನು ಮರೆತು ಕೊಚ್ಚಿ ಕೊಲೆ ಮಾಡಿದ. ಈ ಕೇಸ್ ಸಂಬಂಧ ತಂದೆ ಸೇರಿ ಮೂವರ ಬಂಧನವಾಗಿದೆ.
ಮೃತ ಮಾನ್ಯಗೆ ಇನ್ನು 19 ವರ್ಷವಷ್ಟೇ. ಅದೇ ಗ್ರಾಮದ ಅಂದ್ರೆ ಧಾರವಾಡ ಜಿಲ್ಲೆಯ ಇನಾಂವೀರಾಪುರ ಗ್ರಾಮದ ವಿವೇಕಾನಂದನನ್ನ ಪ್ರೀತಿಸಿದ್ದಳು. ಅನ್ಯ ಜಾತಿಯೆಂಬ ಕಾರಣಕ್ಕೆ ಮನೆಯಲ್ಲಿ ಒಪ್ಪಿಗೆ ನೀಡಿರಲಿಲ್ಲ. ಆದರೂ ಮಾನ್ಯ ಮನೆಯವರ ವಿರೋಧದ ನಡುವೆಯೇ ವಿವೇಕಾನಂದನನ್ನ ಮದುವೆಯಾದಳು. ಊರನ್ನು ಬಿಟ್ಟಿದ್ದರು. ಏಳು ತಿಂಗಳ ಬಳಿಕ ಇನಾಂವೀರಾಪುರ ಗ್ರಾಮಕ್ಕೆ ಬಂದಿದ್ದರು. ಈಗ ಮಾನ್ಯ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಮೂರು ತಿಂಗಳು ಕಳೆದಿದ್ದರೆ ಮನೆಗೊಂದು ಪುಟ್ಟ ಮಗು ಬರ್ತಾ ಇತ್ತು.
ಊರಿಗೆ ಬಂದ ಮಗಳನ್ನ ತಂದೆಯೇ ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಮಾನ್ಯಳನ್ನ ಉಳಿಸಿಕೊಳ್ಳುವುದಕ್ಕೆ ಕುಟುಂಬಸ್ಥರು ಕೂಡ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಮಗಳು ಗರ್ಭಿಣಿ ಎಂಬುದನ್ನು ಲೆಕ್ಕಿಸದೇ ತಂದೆ ಪ್ರಕಾಶ್ ಗೌಡಗೆ ತನ್ನ ಜಾತಿಯೇ ಮುಖ್ಯವಾಗಿದೆ. ಎಷ್ಟು ವರ್ಷಗಳು ಬೇಕು ಈ ರೀತಿಯ ಮನಸ್ಥಿತಿ ದೂರವಾಗುವುದಕ್ಕೆ ಎಂಬುದು ಮಾತ್ರ ಗೊತ್ತಿಲ್ಲ. ಪುಟ್ಟ ಹುಡುಗಿ, ತನ್ನೊಡಲೊಳಗಿದ್ದ ಮತ್ತೊಂದು ಜೀವವನ್ನು ಬಲಿ ಕೊಟ್ಟಿದೆ.






