ಕಾರವಾರ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿ ಕದನ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೈಕಮಾಂಡ್ ಮಾತಿಗೆ ಬೆಲೆ ಕೊಟ್ಟು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮುಗಿಸಿ, ಒಂದು ಒಪ್ಪಂದಕ್ಕೆ ಬಂದಿದ್ದರು ಸಹ, ಇಷ್ಟಾರ್ಥ ಸಿದ್ಧಿಗಾಗಿ ಶತಾಯಗತಾಯ ಪ್ರಯತ್ನಗಳು ನಡೆಯುತ್ತಲೆ ಇವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಇಂದು ಸದನದಲ್ಲಿ ಅಬ್ಬರಿಸಿದ್ದಾರೆ. ಎರಡೂವರೆ ವರ್ಷ ಅಂತ ಎಲ್ಲಿಯೂ ಹೇಳಿಲ್ಲ. ಶಾಸಕರೆಲ್ಲ ಸೇರಿ ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ನನ್ನ ಪರವಾಗಿದೆ. ಹೀಗಾಗಿ ಹೈಕಮಾಂಡ್ ಹೇಳುವ ತನಕ ನಾನೇ ಸಿಎಂ ಎಂದಿದ್ದಾರೆ.
ಇಂದೇ ಡಿಕೆ ಶಿವಕುಮಾರ್ ಅವರು ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಒಪ್ಪಂದ ಆಗಿದೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ. ಇಂದು ಅಂಕೋಲಾದ ಅಂದ್ಲೆ ಜಗದೀಶ್ವರಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದ್ದಾರೆ. ಅದರಲ್ಲೂ ಶತ್ರುಗೆ ಸಂಬಂಧಿಸಿದ ಪೂಜೆ ಮಾಡಿಸಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಸದ್ಯ ಸಿಎಂ ಆಗಬೇಕೆಂಬ ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಅಡೆತಡೆಗಳು ಕಾಡದಿರಲಿ ಎಂಬ ಉದ್ದೇಶದಿಂದಾನೇ ದೇವಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ದೇವಿ ಪೂಜೆಯ ಬಳಿಕ ಈ ಸಂಬಂಧ ಮಾತನಾಡಿದ್ದಾರೆ.
ಐದು ವರ್ಷದ ಹಿಂದೆ ಈ ತಾಯಿ ಸನ್ನಿಧಾನಕ್ಕೆ ಬಂದಿದ್ದೆ. ಕುಟುಂಬದ ವಿಚಾರವನ್ನ ಬೇಡಿಕೊಂಡಿದ್ದೆ. ಅದು ನೆರವೇರಿತ್ತು. ಆಗ ಮತ್ತೆ ಬರುತ್ತೇನೆ ತಾಯಿ ಎಂದು ಹೇಳಿದ್ದೆ. ಅದಕ್ಕೆ ಬಂದಿದ್ದೇನೆ ಎಂದಿದ್ದಾರೆ. ಇದರ ನಡುವೆ ನನ್ನ ಮತ್ತು ಸಿಎಂ ನಡುವೆ ಒಪ್ಪಂದ ಆಗಿದೆ ಎಂಬ ಮಾತನ್ನು ಹೇಳಿದ್ದಾರೆ. ಅದರಲ್ಲೂ ಇಷ್ಟು ದಿನದಲ್ಲಿ ಒಪ್ಪಂದದ ಬಗ್ಗೆ ಕೇಳಿದಾಗ ಡಿಕೆ ಶಿವಕುಮಾರ್ ಒಂದು ಮಾತು ಆಡಿರಲಿಲ್ಲ.






