ಬೆಂಗಳೂರು: ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಗಳಿಗಾಗಿ ತನ್ನ ಹೆಂಡತಿಯನ್ನೇ ಗಂಡ ಕಿಡ್ನ್ಯಾಪ್ ಮಾಡಿಸಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೈತ್ರ ಎಂಬುವವರನ್ನ ಹರ್ಷವರ್ದನ್ ಕಿಡ್ನ್ಯಾಪ್ ಮಾಡಿಸಿದ್ದಾರೆ ಎನ್ನಲಾಗಿದೆ.
ಚೈತ್ರಾ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಹರ್ಷವರ್ಧನ್ ಎಂಟರ್ಪ್ರೈಸ್ ನ ಮಾಲೀಕ ಹಾಗು ಚಿತ್ರ ನಿರ್ಮಾಪಕನಾಗಿದ್ದಾರೆ. ಈ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕೌಟುಂಬಿಕ ಕಲಹದಿಂದ ಇಬ್ಬರು ದೂರವಾಗಿದ್ದರು. ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗುವಿದೆ. ಗಂಡನಿಂದ ದೂರವಾದ ಮೇಲೆ ಚೈತ್ರಾ, ತನ್ನ ಮಗುವನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ವಾಸವಿದ್ದರು.
ಮಗಳಿಗಾಗಿ ಹರ್ಷವರ್ದನ್ ಕಿಡ್ನ್ಯಾಪ್ ಮಾಡಿದ ಆರೋಪ ಎದುರಾಗಿದೆ. ತನ್ನ ಹೆಂಡತಿ ಚೈತ್ರಾಗೆ ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಸ್ನೇಹಿತನಿಂದ ಹೇಳಿಸಿ ಕರೆಸಿಕೊಂಡಿದ್ದಾರೆ. ತನ್ನ ಸ್ನೇಹಿತ ಕೌಶೀಕ್ ಮೂಲಕ ನಟಿ ಚೈತ್ರಾಗೆ ಸಿನಿಮಾ ಆಫರ್ ಅಂತ ಹೇಳಿ 20 ಸಾವಿರ ಅಡ್ವಾನ್ಸ್ ಕೂಡ ನೀಡಿದ್ದರು. ನಂತರ ಪಿಕ್ ಅಪ್ ನೆಪದಲ್ಲಿ ಮೈಸೂರು ರಸ್ತೆ ಮೂಲಕ ನೈಸ್ ರೋಡಲ್ಲಿ ಕಿಡ್ನ್ಯಾಪ್ ಮಾಡಿದ್ದರು. ನಂತರ ಚೈತ್ರಾಳ ತಾಯಿಗೆ ಕರೆ ಮಾಡಿ ನಿನ್ನ ಮಗಳನ್ನ ಕಿಡ್ನ್ಯಾಪ್ ಮಾಡಿದ್ದೇನೆ. ನನ್ನ ಮಗಳನ್ನ ತಂದು ಒಪ್ಪಿಸಿದರೆ ನಿಮ್ಮ ಮಗಳನ್ನ ಸೇಫಾಗಿ ಬಿಡ್ತಿನಿ ಎಂದು ಬೆದರಿಕೆ ಹಾಕಿದ್ದಾರೆ.
ಸದ್ಯ ಈ ಸಂಬಂಧ ದೂರು ನೀಡಿರುವ ಚೈತ್ರಾಳ ಸಹೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.






